ಚಂಡೀಗಢ: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಷಭ್ ಪಂತ್(Rishabh Pant) 15 ತಿಂಗಳ ಬಳಿಕ ಐಪಿಎಲ್(IPL 2024) ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಿದ್ದಾರೆ. ಶನಿವಾರದ ಡಬಲ್ ಹೆಡರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಮೈದಾನಕ್ಕಿಳಿಯುವ ಮೂಲಕ ಪಂತ್ ಅವರ 2ನೇ ಕ್ರಿಕೆಟ್ ಜರ್ನಿ ಆರಂಭವಾಗಿದೆ. ಪಂದ್ಯದಲ್ಲಿ ಟಾಸ್ ಗೆದ್ದ ಶಿಖರ್ ಧವನ್ ಸಾರಥ್ಯದ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಪಂತ್ ತಂಡಕ್ಕೆ ಮರಳಿರುವುದು ಡೆಲ್ಲಿಗೆ(Delhi Capitals) ನೈತಿಕ ಬಲ ಒದಗಿಸಿದೆ. ಡೆಲ್ಲಿ ಫ್ರಾಂಚೈಸಿಯು ಪಂತ್ ಅವರ ಕಮ್ಬ್ಯಾಕ್ನ ಕಿರು ವಿಡಿಯೊವೊಂದನ್ನು ಕೂಡ ಟ್ವೀಟರ್ ಎಕ್ಸ್ನಲ್ಲಿ ಹಂಚಿಕಿಕೊಂಡಿದೆ.
ಐಪಿಎಲ್ ಆರಂಭಕ್ಕೂ ಮುನ್ನ ಪಂತ್ ಅವರು ನನಗೆ ಮತ್ತೆ ಕ್ರಿಕೆಟ್ ಪದಾರ್ಪಣೆ ಮಾಡುತ್ತಿರುವ ಅನುಭವ ಆಗುತ್ತಿದೆ ಎಂದಿದ್ದರು. ದುಬೈನಲ್ಲಿ ಧೋನಿ ಪರಿವಾರದೊಂದಿಗೆ ಕ್ರಿಸ್ಮಸ್ ಪಾರ್ಟಿಯಲ್ಲಿ ಪಾಲ್ಗೊಂಡು. ಈ ಪಾರ್ಟಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಪಂತ್ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. 2022ರ ಡಿಸೆಂಬರ್ 30ರಂದು(rishabh pant accident date) ಈ ಅವಘಡ ಸಂಭವಿಸಿತ್ತು.
ಇದನ್ನೂ ಓದಿ IPL 2024: ಉದ್ಘಾಟನಾ ಪಂದ್ಯದಲ್ಲೇ ದಾಖಲೆ ಬರೆದ ಮಹೇಂದ್ರ ಸಿಂಗ್ ಧೋನಿ
𝐑𝐚𝐛 𝐑𝐚𝐤𝐡𝐚 𝐑𝐢𝐬𝐡𝐚𝐛𝐡 🫶
— Delhi Capitals (@DelhiCapitals) March 23, 2024
There are comeback stories and then there is a Rishabh Pant comeback story ❤️
Audio Courtesy – JioCinema#YehHaiNayiDilli #IPL2024 #PBKSvDC | @RishabhPant17 pic.twitter.com/MUiUD3g63u
ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯದೊಂದಿಗೆ ರಿಷಭ್ ಪಂತ್ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಗಿತ್ತು.
ಮೊದಲ ಬಾರಿಗೆ ಪಂತ್ ಅವರು ತಮ್ಮ ಚೇತರಿಕೆ ಅಪ್ಡೇಟ್ ನೀಡಿದ್ದು ಊರುಗೋಲಿನ ಸಹಾಯದಿಂದ ನಡೆದಾಡುವ ಫೋಟೊ ಹಂಚಿಕೊಂಡು ಬಳಿಕ ಸ್ವಿಮಿಂಗ್ ಪೂಲ್ನಲ್ಲಿ ನಡೆದಾಡಿದ್ದು ಹೀಗೆ ಹಲವು ಚೇತರಿಕೆಯ ಹಂತವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಾ ಬಂದು ಇದೀಗ ಅಂತಿಮವಾಗಿ ಕ್ರಿಕೆಟ್ ಅಂಗಳಕ್ಕೆ ಮರಳಿದ್ದಾರೆ.
ದೇವರಿಗೆ ಧನ್ಯವಾದ ತಿಳಿಸಿದ್ದ ಪಂತ್
ರಿಷಭ್ ಪಂತ್ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್ ಕ್ರಿಕೆಟ್ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್‌ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಇದೀಗ ಅಪಾಯದಿಂದ ಪಾರಾಗಿ ಮತ್ತೆ ಕ್ರಿಕೆಟ್ ಆಡುವಂತಾಗಿದ್ದಾರೆ. ಇದೇ ಖಷಿಯಲ್ಲಿ ಪಂತ್ ಅವರು “ನಾನು ಕತ್ತಲೆಯ ಸುರಂಗದಲ್ಲಿ ಮತ್ತೆ ಬೆಳಕನ್ನು ನೋಡಲಾರಂಭಿಸಿದೆ. ಇದನ್ನು ಕರುಣಿಸಿದ ದೇವರಿಗೆ ಧನ್ಯವಾದಗಳು” ಎಂದು ಇತ್ತೀಚೆಗೆ ನಡೆದಿದ್ದ ಸಂದರ್ಶನದಲ್ಲಿ ಹೇಳಿದ್ದರು.