ನವದೆಹಲಿ: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ(IPL 2025 Mega Auction) ಇದೇ ವರ್ಷಾಂತ್ಯದಲ್ಲಿ ಆಟಗಾರರ ಮೆಗಾ ಹರಾಜು ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ನಾಯಕನಾಗಿರುವ ರಿಷಭ್ ಪಂತ್(Rishabh Pant) ರಿಟೈನ್ ಆಸಕ್ತಿ ಹೊಂದಿಲ್ಲ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ. ಪಂತ್ ಚೆನ್ನೈ(Chennai Super Kings) ತಂಡ ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ, ಜತೆಗೆ ಹರಾಜಿನಲ್ಲಿ ಒಂದು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಪಂತ್ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷ ಐಪಿಎಲ್ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್ ಕೀಪರ್ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.
ಇದನ್ನೂ ಓದಿ Rishabh Pant: ರಿಷಭ್ ಪಂತ್ಗೆ ಹೊಸ ಹೆಸರಿಟ್ಟ ವಿವಿಯನ್ ರಿಚರ್ಡ್ಸ್
ಮಹೇಂದ್ರ ಸಿಂಗ್ ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್ ಪಂತ್ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್ಗೆ ಸಲಹೆ ನೀಡುತ್ತಾರೆ. ಪಂತ್ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್ ಅವರನ್ನು ಸಿಎಸ್ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್ ಚೆನ್ನೈ ಸೇರಿದರೆ ಕೀಪಿಂಗ್ ನಡೆಸಬಹುದು. ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟಿಂಗ್ ಮಾತ್ರ ನಡೆಸುವ ಸಾಧ್ಯತೆ ಇದೆ.
ಇಂಪ್ಯಾಕ್ಟ್ ನಿಯಮ ಕೈಬಿಡುವ ಸಾಧ್ಯತೆ!
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.