ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್(Rishabh Pant) ಚೇತರಿಸಿಕೊಳ್ಳುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ಆದರೆ ಯುವ ಕ್ರಿಕೆಟಿಗರು ಇನ್ನಾದರೂ ಇಂತಹ ಅವಘಡಗಳಿಗೆ ಒಳಗಾಗಬೇಡಿ ಎಂದು ವಿಶ್ವ ಕಪ್ ವಿಜೇತ ನಾಯಕ ಕಪಿಲ್ ದೇವ್ ಅತ್ಯಮೂಲ್ಯ ಸಲಹೆ ನೀಡಿದ್ದಾರೆ.
ರಿಷಭ್ ಪಂತ್ಗೆ ಸಂಭವಿಸಿದ ಅಪಘಾತದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಪಿಲ್‍ದೇವ್, ಯುವ ಕ್ರಿಕೆಟಿಗರು ತುಂಬಾ ವೇಗವಾಗಿ ಚಲಿಸುವ ಕಾರುಗಳನ್ನು ಹೊಂದಿದ್ದೀರಿ, ಹಾಗೂ ಮಿಂಚಿನ ವೇಗದಲ್ಲಿ ಕಾರುಗಳನ್ನು ಚಲಿಸುತ್ತೀರಿ, ದಯವಿಟ್ಟು ನಿಮ್ಮ ಕ್ರಿಕೆಟ್ ಹಾಗೂ ಜೀವದ ದೃಷ್ಟಿಯಿಂದಾಗಿ ನೀವು ಇನ್ನು ಮುಂದೆ ನೀವೇ ಕಾರುಗಳನ್ನು ಚಲಾಯಿಸುವ ಬದಲು, ಚಾಲಕರನ್ನು ನೇಮಿಸಿಕೊಳ್ಳುವುದು ಸೂಕ್ತ ಎಂದು ಅವರು ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
“ನಿಮ್ಮ ವಯಸ್ಸಿನಲ್ಲಿ ಕಾರುಗಳನ್ನು ವೇಗವಾಗಿ ಚಲಾಯಿಸುವುದು ಸಹಜ ಪ್ರಕ್ರಿಯೆ, ಆದರೆ ನಿಮ್ಮ ಜೀವದ ಸುರಕ್ಷತೆಯನ್ನು ನೀವೇ ಕೈಗೊಳ್ಳಬೇಕಾಗಿರುವುದರಿಂದ ಇನ್ನೂ ಮುಂದಾದರೂ ವಾಹನಗಳನ್ನು ವೇಗವಾಗಿ ಚಲಾಯಿಸದೆ ಸುರಕ್ಷತೆಗೆ ಗಮನ ಹರಿಸಿ” ಎಂದು ಕಪಿಲ್ ಹೇಳಿದ್ದಾರೆ.
ನನಗೂ ಅಪಘಾತ ಸಂಭವಿಸಿತ್ತು!
ನಿಮ್ಮ ವಯಸ್ಸಿನಲ್ಲಿ ನಾನು ಕೂಡ ಅತಿ ವೇಗವಾಗಿ ಬೈಕ್ ಚಲಾಯಿಸುತ್ತಿದ್ದೆ. ಆದರೆ ಆ ವೇಗವೇ ನನಗೆ ಅಪಾಯ ತಂದೊಡ್ಡಿತ್ತು. ಒಂದು ಬಾರಿ ನನ್ನ ಬೈಕ್ ಅಪಘಾತಕ್ಕೀಡಾಯಿತು. ಬಳಿಕ ಮತ್ತೆ ನಾನು ಬೈಕ್ ಬಳಸದಂತೆ ನನ್ನ ಸಹೋದರ ಎಚ್ಚರಿಕೆ ವಹಿಸಿದ್ದರು ಎಂದು ಕಪಿಲ್‍ದೇವ್ ಹಿಂದಿನ ಘಟನೆಯನ್ನು ಸ್ಮರಿಸಿಕೊಂಡರು.
ರಿಷಭ್ ಪಂತ್ ಅವರ ಆರೋಗ್ಯದ ಕುರಿತು ಪ್ರಸ್ತಾಪಿಸಿದ ಕಪಿಲ್ ದೇವ್, ಪಂತ್ ಅವರ ಜೀವವನ್ನು ಕಾಪಾಡಿದ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಶೀಘ್ರ ಗುಣಮುಖರಾಗಿ ಕ್ರಿಕೆಟ್ ಮೈದಾನಕ್ಕೆ ಮರಳುವಂತಾಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ | Rishabh Pant | ಪಂತ್ ಜತೆ ನಾವಿದ್ದೇವೆ; ಶೀಘ್ರ ಗುಣಮುಖರಾಗಲಿ; ಹಾರ್ದಿಕ್ ಪಾಂಡ್ಯ ಹಾರೈಕೆ