ಉತ್ತರಾಖಂಡ: ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಬ್ ಪಂತ್(Rishabh Pant) ಮನೆಯ ಮುಂದೆ ಹೊಸ ಸಮಸ್ಯೆಯೊಂದು ಉದ್ಭವಿಸಿದೆ. ಉತ್ತರಾಖಂಡದ ರೂರ್ಕಿಯಲ್ಲಿರುವ ಪಂತ್ ಮನೆಯ ಮುಂದೆ ರೈಲ್ವೇ ಇಲಾಖೆ ಹತ್ತಾರು ಕಂಬಗಳನ್ನು ನೆಟ್ಟಿದೆ.
ರೈಲ್ವೇ ಇಲಾಖೆಗೆ ಸೇರಿದ ಭೂಮಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ ಹಿನ್ನೆಲೆ ರೂರ್ಕಿಯಲ್ಲಿರುವ ಪಂತ್ ಮನೆಯ ಮುಂದೆ ರೈಲ್ವೇ ಅಧಿಕಾರಿಗಳು ಹತ್ತಾರು ಕಂಬಗಳನ್ನು ನೆಟ್ಟಿದ್ದಾರೆ. ಈ ಸಂದರ್ಭದಲ್ಲಿ ಜನರು ರೈಲ್ವೇ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದರ ಹೊರತಾಗಿಯೂ, ರೈಲ್ವೇ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಂಬಗಳನ್ನು ಹೂತುಹಾಕಿದರು. ಜತೆಗೆ ಪಂತ್ ಮನೆ ಮುಂದೆ ಪಿಲ್ಲರ್ ನೆಟ್ಟಿದ್ದಕ್ಕೆ ರೈಲ್ವೇ ಅಧಿಕಾರಿಗಳು ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅತಿಕ್ರಮಣ ವಿರೋಧಿ ಅಭಿಯಾನದ ಅಡಿಯಲ್ಲಿ ರೈಲ್ವೇ ಇಲಾಖೆ ಪಂತ್ ಅವರ ಮನೆಯ ಮುಂದೆ ಕಂಬಗಳನ್ನು ನೆಡಲಾಗಿದೆ ಎಂದು ತಿಳಿಸಿದ್ದಾರೆ.
“ಈ ಭೂಮಿ ರೈಲ್ವೇಗೆ ಸೇರಿದ್ದು, ಈ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ. ಒಂದೊಮ್ಮೆ ರಿಷಬ್ ಪಂತ್ ಸೇರಿ ಹಲವು ಮನೆ ಮುಂದೆ ನೆಟ್ಟ ಕಂಬಗಳನ್ನು ತೆಗೆಯಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ರೈಲ್ವೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜತೆಗೆ ರೈಲ್ವೇ ತನ್ನ ಉದ್ಯೋಗಿಗಳನ್ನು ಮೇಲ್ವಿಚಾರಣೆಗಾಗಿ ಇಲ್ಲಿ ನಿಯೋಜಿಸಿದೆ.
ಹಲವು ಮನೆಗಳ ಮುಂದೆ ರೈಲ್ವೇ ಪಿಲ್ಲರ್
ಪಂತ್ ಮಾತ್ರವಲ್ಲದೆ ಹಲವು ಮನೆಗಳ ಮುಂದೆಯೂ ರೈಲ್ವೇ ಇಲಾಖೆ ಕಂಬಗಳನ್ನು ನೆಟ್ಟಿದೆ. ರೈಲ್ವೇ ಇಲಾಖೆಗೆ ಸೇರಿದ ಭೂಮಿಯನ್ನು ಜನರು ಒತ್ತುವರಿ ಮಾಡಿಕೊಂಡು ಸ್ವಂತ ಪಾರ್ಕಿಂಗ್ ಮಾಡುವ ಮೂಲಕ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ತಡೆಯಲು ರೈಲ್ವೇ ಇಲಾಖೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರೈಲ್ವೇಯ ಈ ಕ್ರಮದಿಂದ ರಿಷಬ್ ಪಂತ್ ಮನೆಯೂ ಸಿಕ್ಕಿಬಿದ್ದಿದೆ. ಹಲವು ಬಾರಿ ನೋಟಿಸ್ ನೀಡಿದರೂ ಜನರು ರೈಲ್ವೇ ಭೂಮಿಯನ್ನು ಅತಿಕ್ರಮಣ ಮಾಡುವುದನ್ನು ಮುಂದುವರೆಸಿದ್ದರು. ಇದನ್ನೂ ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೇಯ ಹಿರಿಯ ವಿಭಾಗದ ಎಂಜಿನಿಯರ್ ಬ್ರಜ್ ಮೋಹನ್ ಸಿಂಗ್ ತಿಳಿಸಿದ್ದಾರೆ.
ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿರುವ ರಿಷಭ್ ಪಂತ್ ಈ ಘಟನೆಯ ಬಗ್ಗೆ ಇದುರವರೆಗೆ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ | INDvsNZ | ಭಾರತಕ್ಕೆ ಪ್ರವಾಸ ಬರುವ ನ್ಯೂಜಿಲೆಂಡ್ ತಂಡದಲ್ಲಿ ವಿಲಿಯಮ್ಸನ್ ಇರುವುದಿಲ್ಲ; ಯಾಕೆ ಗೊತ್ತೇ?