Site icon Vistara News

Rishabh Pant | ರಿಷಭ್​ ಪಂತ್​ ಏಕದಿನ ವಿಶ್ವ ಕಪ್​ನಿಂದ ಬಹುತೇಕ ಔಟ್​; ವರದಿ

Rishabh Pant

ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಮ್​ ಇಂಡಿಯಾ ಆಟಗಾರ ರಿಷಭ್(Rishabh Pant)​ ಪಂತ್​ 2023ರಲ್ಲಿ ನಡೆಯಲಿರುವ ಎಲ್ಲ ಕ್ರಿಕೆಟ್​ ಸರಣಿಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈಗಾಗಲೇ ಅವರು ಐಪಿಎಲ್​ನಿಂದ ಹೊರಬಿದ್ದಿದ್ದು ಇದೀಗ ಏಕ ದಿನ ವಿಶ್ವಕಪ್​ನಿಂದಲೂ ಹೊರಬೀಳಲಿದ್ದಾರೆ ಎಂದು ವರದಿಯಾಗಿದೆ.

ರಿಷಭ್​ ಪಂತ್ ಕಳೆದ ಡಿಸೆಂಬರ್ 30ರಂದು ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದ ವೇಳೆ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಸದ್ಯ ಅವರು ಮುಂಬೈನಲ್ಲಿ ಮೊಣಕಾಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾರೆ.

ಈಗಾಗಲೇ ಪಂತ್​ ಅವರ ಚೇತರಿಕೆಗೆ ಆರು ತಿಂಗಳಿಗಿಂತ ಹೆಚ್ಚು ಕಾಲ ಬೇಕಾಗಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಮಾಡುವ ಸಾಧ್ಯತೆ ತುಂಬಾ ಕಡಿಮೆ. ಕಳೆದ ವಾರವಷ್ಟೇ ಪಂತ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶೀಘ್ರದಲ್ಲೇ ಅವರು ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಅವರಿಗೆ ಚೇತರಿಕೆಗೆ ಮತ್ತಷ್ಟು ಸಮಯ ಬೇಕಾಗಿರುವುದರಿಂದ ಅವರು ಬಹುತೇಕ ವಿಶ್ವಕಪ್​ನಿಂದ ಹೊರಬೀಳುವುದು ಖಚಿತ ಎಂದು ವರದಿಯಾಗಿದೆ.

ಇನ್ನೊಂದೆಡೆ ಪಂತ್ ಚೇತರಿಸಿಕೊಳ್ಳುವ ಅವಧಿ ಕುರಿತು ಬಿಸಿಸಿಐ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ‌ ಅವರು ಕನಿಷ್ಠ ಆರು ತಿಂಗಳ ಕಾಲ ಹೊರಗುಳಿಯುತ್ತಾರೆ ಎಂದು ಆಯ್ಕೆಗಾರರು ಮತ್ತು ಮಂಡಳಿಯ ಸದಸ್ಯರು ಹೇಳಿರುವುದಾಗಿ ತಿಳಿದುಬಂದಿದೆ. ಜತೆಗೆ ಪಂತ್​ 6 ತಿಂಗಳ ಬಳಿಕ ಚೇತರಿಕೆ ಕಂಡರೂ ಆ ಬಳಿಕ ಫಿಟ್‌ನೆಸ್‌ ಕಾರಣದಿಂದಾಗಿ ಮತ್ತೊಂದಷ್ಟು ತಿಂಗಳು ಅವರು ಮೈದಾನಕ್ಕೆ ಇಳಿಯುವುದಕ್ಕೆ ಬಿಸಿಸಿಐ ತಡೆ ನೀಡಬಹುದು ಈ ಎಲ್ಲ ಕಾರಣಗಳಿಂದ ಪಂತ್​ ಅವರನ್ನು ವಿಶ್ವ ಕಪ್​ ತಂಡಕ್ಕೆ ಪರಿಗಣನೆ ಮಾಡುವುದು ಕಷ್ಟ ಎಂದು ತಿಳಿದುಬಂದಿದೆ. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ | Rishabh Pant | ಕಾರು ಅಪಘಾತದ ಬಳಿಕ ಮೊದಲ ಬಾರಿ ಎದ್ದು ನಿಂತ ರಿಷಭ್​ ಪಂತ್​; ಸರ್ಜರಿ ಬಳಿಕ ಚೇತರಿಕೆ

Exit mobile version