ಬೆಂಗಳೂರು: ಕಳೆದ ವರ್ಷ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ(rishabh pant accident) ಗಾಯಗೊಂಡು ಪವಾಡ ಸದೃಶವಾಗಿ ಪಾರಾಗಿದ್ದ ರಿಷಭ್ ಪಂತ್ (Rishabh Pant)ಅವರು ಸದ್ಯ ಉತ್ತಮ ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರು ಮುಂದಿನ ವರ್ಷ ಕ್ರಿಕೆಟ್ಗೆ ಮತ್ತೆ ಮರಳುವ ಎಲ್ಲ ಸಾಧ್ಯತೆಯೂ ದಟ್ಟವಾಗಿದೆ. ಅಪಘಾತದಿಂದ ಪಾರಾದ ಕುರಿತಾಗಿ ಇನ್ಸ್ಟಾಗ್ರಾಮ್(rishabh pant instagram) ಖಾತೆಯಲ್ಲಿ ಭಾವನಾತ್ಮಕ ಬರಹವೊಂದನ್ನು ಬರೆದಿದ್ದಾರೆ. “2023ರ ಜನವರಿ 5ರಂದು ಮರು ಜನ್ಮ ಪಡೆದೆ’ ಎಂದು ಬರೆದುಕೊಂಡಿದ್ದಾರೆ.
ಕಳೆದ ಡಿಸೆಂಬರ್ 30ರಂದು ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಬೈಗೆ ಅವರನ್ನು ಜನವರಿ 5ರಂದು ಏರ್‌ಲಿಫ್ಟ್ ಮಾಡಲಾಗಿತ್ತು. ಇದೇ ದಿನಾಂಕವನ್ನು ಪಂತ್ ತಮ್ಮ ಇನ್‌ಸ್ಟಾಗ್ರಾಂ ಬಯೋದಲ್ಲಿ ‘2ನೇ ಜನ್ಮದಿನ: 05/01/23’ ಎಂದು ಬರೆದುಕೊಂಡಿದ್ದಾರೆ.
ಮುಂಬೈಗೆ ಏರ್‌ಲಿಫ್ಟ್ ಮಾಡಿದ ಬಳಿಕ ಪಂತ್ಗೆ ಉನ್ನತ ಮಟ್ಟದ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಅವರು ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಐಪಿಎಲ್ ವೇಳೆ ಊರುಗೋಲಿನಲ್ಲಿ ಕಾಣಿಸಿಕೊಂಡಿದ್ದ ಅವರು ಇದೀಗ ಯಾವುದೇ ಸಹಾಯವಿಲ್ಲದೆ ನಡೆದಾಡುತ್ತಿದ್ದಾರೆ. ಕಳೆದ ವಾರವಷ್ಟೇ ಮೆಟ್ಟಿಲುಗಳನ್ನು ಸರಗವಾಗಿ ಏರಿ ಇಳಿಯುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದರು. ಅವರ ಚೇತರಿಕೆಯ ಎಲ್ಲ ಅಪ್ಡೇಟ್ಸ್ಗಳನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡುತ್ತಿರುತ್ತಾರೆ.
ಇದನ್ನೂ ಓದಿ Rishabh Pant: ಅಂಡರ್-16 ಆಟಗಾರರಿಗೆ ಕ್ರಿಕೆಟ್ ಸಲಹೆ ನೀಡಿದ ರಿಷಭ್ ಪಂತ್; ಫೋಟೊ ಹಂಚಿಕೊಂಡ ಬಿಸಿಸಿಐ
ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ಕಾರ್ಯದಲ್ಲಿ ತೊಡಗಿರುವ ಅವರು, ವೇಗದ ಬೌಲರ್ ಹಾಗೂ ಸಹ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್, ಕೆ.ಎಲ್ ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಅವರು ವ್ಯಾಯಾಮ ಮಾಡುತ್ತಿದ್ದಾರೆ. ಯುವ ಬ್ಯಾಟರ್ನ ಚಲನವಲನ ನೋವು ರಹಿತವಾಗಿ ಕಂಡರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಿದೆ ಎಂದು ಫಿಸಿಯೋ ಎಸ್ ರಜನಿಕಾಂತ್ ಹೇಳಿದ್ದಾರೆ.