ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಸಂದರ್ಭದಲ್ಲೂ ರಿಷಭ್ ಪಂತ್(Rishabh Pant) ಅವರು ತಮ್ಮ ತಾಯಿಯನ್ನು ಕನವರಿಸುತ್ತಿದ್ದ ವಿಚಾರ ಇದೀಗ ತಿಳಿದುಬಂದಿದೆ. ಪಂತ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಬಸ್ ಚಾಲಕ ಸುಶೀಲ್ ಕುಮಾರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ರಿಷಭ್ ಪಂತ್ ಅವರು ತಮ್ಮ ತಾಯಿಗೆ ಕರೆ ಮಾಡುವಂತೆ ಕೇಳಿಕೊಂಡರು ಎಂದು ಸುಶೀಲ್ ಹೇಳಿದ್ದಾರೆ.
ಶುಕ್ರವಾರ (ಡಿಸೆಂಬರ್ 30) ಪಂತ್ ಕಾರಿನಲ್ಲಿ ದೆಹಲಿಯಿಂದ ಉತ್ತರಾಖಂಡದ ಕಡೆಗೆ ಏಕಾಂಗಿಯಾಗಿ ಹೊರಟಿದ್ದರು. ಇದೇ ವೇಳೆ ಡೆಲ್ಲಿ- ಡೆಹ್ರಾಡೂನ್ ಎಕ್ಸ್ಪ್ರೆಸ್ವೇನ ರೂರ್ಕಿ ನರ್ಸನ್ ಗಡಿಯ ಬಳಿ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಸದ್ಯ ಅವರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಂತ್ ಅವರನ್ನು ರಕ್ಷಿಸಿದ ಬಸ್ ಡ್ರೈವರ್ ಸುಶೀಲ್ ಕುಮಾರ್ ಇದೀಗ ಅಪಘಾತ ಸಂಭವಿಸಿದ ವೇಳೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದದ್ದನ್ನು ನೋಡಿದೆ. ಇದೇ ವೇಳೆ, ನಾನು ಬಸ್ ನಿಲ್ಲಿಸಿ ನೆರವಿಗೆ ಧಾವಿಸಿದೆ. ಅಷ್ಟರಲ್ಲಿ ಪಂತ್ ತಮ್ಮ ಕಾರಿನ ಕಿಟಕಿಯಿಂದ ಅರ್ಧದಷ್ಟು ಹೊರಗಿದ್ದರು. ಕೂಡಲೇ ಅವರನ್ನು ಕಾರಿನಿಂದ ಹೊರತೆಗೆದ ಬಳಿಕ ಬೇರೆ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸಿದೆ. ಆದರೆ ಯಾರು ಇರಲಿಲ್ಲ. ಈ ವೇಳೆ ಪಂತ್ ನಾನು ಕ್ರಿಕೆಟಿಗ ನನ್ನ ಹೆಸರು ರಿಷಭ್ ಪಂತ್ ಎಂದು ಹೇಳಿ, ತಮ್ಮ ತಾಯಿಗೆ ಕರೆ ಮಾಡುವಂತೆ ಹೇಳಿದರು. ಬಳಿಕ ತಾಯಿಯ ನಂಬರ್ ಕೊಟ್ಟರು. ತಕ್ಷಣ ನಾವು ಆ ಸಂಖ್ಯೆಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು ಎಂದು ಘಟನೆಯನ್ನು ವಿವರಿಸಿದ್ದಾರೆ.
ಪಂತ್ ಅವರ ಜೀವ ಉಳಿಸಿ ಮಾನವೀಯತೆ ಮೆರೆದ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್‌ಗೆ ಶನಿವಾರ ಹರ್ಯಾಣ ರಾಜ್ಯ ಸಾರಿಗೆ ಸಂಸ್ಥೆ ಸನ್ಮಾನಿಸಿ, ಗೌರವಿಸಿತ್ತು.
ಇದನ್ನೂ ಓದಿ | Rishabh Pant | ಆಸ್ಟ್ರೇಲಿಯಾ ಟೆಸ್ಟ್ ಸರಣಿ ಜತೆಗೆ ಐಪಿಎಲ್ನಿಂದಲೂ ಸಂಪೂರ್ಣವಾಗಿ ಹೊರಬಿದ್ದ ರಿಷಭ್ ಪಂತ್!