Site icon Vistara News

Rishabh Pant | ಹೊತ್ತಿ ಉರಿಯುತ್ತಿದ್ದ ಕಾರಿನ ಬಳಿಯಿಂದ ರಿಷಭ್ ಪಂತ್​ ಪ್ರಾಣ ಉಳಿಸಿದ್ದು ಬಸ್‌ ಡ್ರೈವರ್‌!

Rishabh Pant Car Accident

ನವದೆಹಲಿ: ಟೀಮ್​ ಇಂಡಿಯಾದ ಯುವ ಆಟಗಾರ ರಿಷಭ್​ ಪಂತ್(Rishabh Pant)​ ಶುಕ್ರವಾರ ಬೆಳಗ್ಗೆ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಂತ್​ ಅವರು ದೆಹಲಿಯಿಂದ ಉತ್ತರಾಖಂಡದ ಕಡೆಗೆ ಏಕಾಂಗಿಯಾಗಿ ಹೊರಟಿದ್ದರು. ಡೆಲ್ಲಿ- ಡೆಹ್ರಾಡೂನ್​ ಎಕ್ಸ್​ಪ್ರೆಸ್​ವೇನ ರೂರ್ಕಿ ನರ್ಸನ್​ ಗಡಿಯ ಬಳಿ ಬೆಳಗ್ಗೆ 5.30ಕ್ಕೆ ಅಪಘಾತ ಸಂಭವಿಸಿದೆ.

ಅತಿವೇಗದಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಪಂತ್ ನಿಯಂತ್ರಣ ತಪ್ಪಿದ ಕಾರು, ರೋಡ್ ಡಿವೈಡರ್‌ಗೆ ಅಪ್ಪಳಿಸಿದೆ. ಪರಿಣಾಮ ಕಾರು ಪಲ್ಟಿಹೊಡೆದು ಬಿದ್ದಿದೆ. ಇದರ ಬೆನ್ನಲ್ಲೇ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಸ್‌ ಡ್ರೈವರ್ ಸುಶೀಲ್ ಎಂಬಾತ ತಕ್ಷಣವೇ ಪಂತ್ ರಕ್ಷಣೆಗೆ ಆಗಮಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಘಟನೆಯ ಕುರಿತು ಬಸ್ ಡ್ರೈವರ್ ಸುಶೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದದ್ದನ್ನು ನೋಡಿದೆ. ಇದೇ ವೇಳೆ ಕಾರಿನಿಂದ ವ್ಯಕ್ತಿಯೊಬ್ಬರು ಕುಂಟುತ್ತಲೇ ಹೊರಬಂದರು. ನಾನು ಅವರ ಹತ್ತಿರವೇ ಬಸ್‌ ನಿಲ್ಲಿಸಿದೆ. ಆಗವರು ನಾನು ರಿಷಭ್ ಪಂತ್ ಎಂದು ಹೇಳಿದರು. ನಾನಾಗ ಅವರನ್ನು ಸುರಕ್ಷಿತ ಸ್ಥಳದಲ್ಲಿ ಕೂರಿಸಿದೆ. ನಂತರ ಆಂಬ್ಯುಲೆನ್ಸ್‌ಗೆ ಕರೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

200 ಮೀಟರ್ ನೆಲದಲ್ಲಿ ಉಜ್ಜಿದ ಕಾರು

ನಾನು ಹರಿದ್ವಾರ್ ಕಡೆಯಿಂದ ಬರುತ್ತಿದ್ದೆ. ಇದೇ ವೇಳೆ ಕಾರು ಅಪಘಾತ ಸಂಭವಿಸಿದೆ. ಅಪಘಾತವಾದ ರಭಸಕ್ಕೆ ಕಾರು ಸುಮಾರು 200 ಮೀಟರ್ ನೆಲದಲ್ಲಿ ಉಜ್ಜಿಕೊಂಡು ಹೋಯಿತು. ಇದೇ ವೇಳೆ ಪಂತ್​ ಅವರ ಪರ್ಸ್‌ ಹಾಗೂ ಹಣ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ರಸ್ತೆ ಮೇಲೆ ಬಿದ್ದಿದ್ದ ಆ ಹಣವನ್ನೆಲ್ಲ ಆರಿಸಿ ಪಂತ್‌ಗೆ ಒಪ್ಪಿಸಿದ್ದಾಗಿ ಬಸ್ ಡ್ರೈವರ್ ಸುಶೀಲ್‌ ತಿಳಿಸಿದ್ದಾರೆ.

ಇದನ್ನೂ ಓದಿ | Rishabh Pant Car Accident | ಕಾರು ಅಪಘಾತದಲ್ಲಿ ಗಾಯಗೊಂಡ ಪಂತ್​ ಚೇತರಿಕೆಗೆ ವಿರಾಟ್ ಕೊಹ್ಲಿ ಸೇರಿ ಹಲವು ಕ್ರಿಕೆಟಿಗರ ಹಾರೈಕೆ

Exit mobile version