ನವ ದೆಹಲಿ : ಮುಂಬರುವ ಟಿ೨೦ ವಿಶ್ವ ಕಪ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತ ಕ್ರಿಕೆಟ್ ತಂಡ ಇನ್ನೇನು ಟೂರ್ನಿ ಹತ್ತಿರ ಬರುತ್ತಿದ್ದಂತೆ ಒತ್ತಡಕ್ಕೆ ಒಳಗಾಗುತ್ತಿದೆಯಂತೆ. ಹೀಗೆಂದು ಹೇಳಿದ್ದು, ಮತ್ಯಾರು ಅಲ್ಲ, ಟೀಮ್ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್. ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ಪ್ಲೇಆಫ್ ಹಂತಕ್ಕೇರುವ ಅವಕಾಶ ಕಳೆದುಕೊಂಡಿತ್ತು. ಹೀಗಾಗಿ ಈ ಬಾರಿ ಕಪ್ ಗೆದ್ದೇ ಗೆಲ್ಲುವ ಉತ್ಸಾಹದಲ್ಲಿರುವ ರೋಹಿತ್ ಶರ್ಮ ಬಳಗ ಒತ್ತಡಕ್ಕೆ ಒಳಗಾಗುತ್ತಿರುವುದು ಸಹಜ.
ವಿಶ್ವ ಕಪ್‌ಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಅದಕ್ಕಾಗಿ ಭಾರತ ತಂಡದ ಆಟಗಾರರು ಮಾನಸಿಕವಾಗಿ ಸಜ್ಜಾಗುತ್ತಿದ್ದಾರೆ. ಏತನ್ಮಧ್ಯೆ ಮಾತನಾಡಿರುವ ರಿಷಭ್ ಪಂತ್, ತಂಡದ ಸ್ವಲ್ಪ ಪ್ರಮಾಣದ ಒತ್ತಡದಲ್ಲಿದೆ ಎಂದು ಹೇಳಿದೆ.
“ವಿಶ್ವ ಕಪ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹೀಗಾಗಿ ತಂಡ ಸ್ವಲ್ಪ ಒತ್ತಡವನ್ನು ಎದುರಿಸುತ್ತಿದೆ. ಇದೇ ವೇಳೆ ತಂಡದ ಸದಸ್ಯರಾಗಿರುವ ನಾವು ಗೆಲುವಿಗಾಗಿ ನೂರಕ್ಕೆ ೧೦೦ರಷ್ಟು ಪ್ರಯತ್ನ ಪಡುವ ವಿಶ್ವಾಸದಲ್ಲಿದ್ದೇವೆ. ಅಷ್ಟು ಮಾತ್ರ ನಾವು ಮಾಡಲು ಸಾಧ್ಯ,” ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ನಾವು ಫೈನಲ್ ತಲುಪುವುದಲ್ಲಿ ಯಾವುದೇ ಅನುಮಾನಗಳು ಇಲ್ಲ ಎಂಬುದಾಗಿಯೂ ನುಡಿದಿದ್ದಾರೆ.
ಟೀಮ್ ಇಂಡಿಯಾದ ಸದಸ್ಯರಾಗಿರುವ ನಮಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅಂತೆಯೇ ಆಸ್ಟ್ರೇಲಿಯಾದಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅವರ ಬೆಂಬಲ ನಮ್ಮ ಗೆಲುವನ್ನು ಸುಲಭವಾಗಿಸಲಿದೆ,” ಎಂದು ಪಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಸಚಿನ್ sixer ದಾಖಲೆ ಮೀರಿದ ರಿಷಭ್ ಪಂತ್