ಆ್ಯಂಡಿಗುವಾ: ಶನಿವಾರ ರಾತ್ರಿ ನಡೆದ ಸೂಪರ್-8 ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ(India vs Bangladesh) ವಿರುದ್ಧ 50 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದ ಅತ್ಯುತ್ತಮ ಫೀಲ್ಡಿಂಗ್ ಪ್ರಶಸ್ತಿಗೆ ನೀಡಲು ವೆಸ್ಟ್ ಇಂಡೀಸ್ನ ಕ್ರಿಕೆಟ್ ದಂತಕಥೆ ವಿವಿಯನ್ ರಿಚರ್ಡ್ಸ್(Viv Richards) ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್ಗೆ ಬಂದಿದ್ದರು. ಈ ವೇಳೆ ರಿಷಭ್ ಪಂತ್ಗೆ ನೂತನ ಹೆಸರೊಂದನ್ನು ಇಟ್ಟಿದ್ದಾರೆ.
ಅತ್ಯತ್ತಮ ಫೀಲ್ಡಿಂಗ್ ಅವಾರ್ಡ್ ಪ್ರಶಸ್ತಿಯನ್ನು ಸೂರ್ಯಕುಮಾರ್ ಯಾದವ್ ಪಡೆದುಕೊಂಡರು. ಕಳೆದ ವರ್ಷ ನಡೆದಿದ್ದ ಏಕದಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮ್ಯಾನೆಜ್ಮೆಂಟ್ ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬವ ನಿಟ್ಟಿನಲ್ಲಿ, ಪಂದ್ಯವೊಂದರಲ್ಲಿ ಉತ್ತಮ ಫೀಲ್ಡಿಂಗ್(Best Fielder Award) ನಡೆಸಿದರೆ ಆತನನ್ನು ಗುರುತಿಸಿ ಚಿನ್ನದ ಪದಕ ನೀಡುವ ಕಾರ್ಯವನ್ನು ಜಾರಿಗೆ ತಂದಿತ್ತು. ಈ ಪ್ರಕ್ರಿಯೆ ಟಿ20 ವಿಶ್ವಕಪ್ನಲ್ಲಿಯೂ ಮುಂದುವರಿದೆ. ಮೊಹಮ್ಮದ್ ಸಿರಾಜ್ ಅವರು ಹಾಲಿ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಅತ್ಯತ್ತಮ ಪೀಲ್ಡಿಂಗ್ಗಾಗಿ 2 ಚಿನ್ನದ ಪದಕ ಜಯಿಸಿದ್ದಾರೆ.
ತಂಡಕ್ಕೆ ಶುಭ ಹಾರೈಸಿದ ರಿಚರ್ಡ್ಸ್
ಸೂಪರ್-8 ಹಂತದ 2 ಪಂದ್ಯಗಳನ್ನು ಗೆದ್ದು ಅಜೇಯವಾಗಿರುವ ಭಾರತ ತಂಡಕ್ಕೆ ರಿಚರ್ಡ್ಸ್ ಶುಭ ಹಾರೈಸಿದರು. ಜತೆಗೆ ಮುಂದಿನ ಪಂದ್ಯಗಳಲ್ಲಿಯೂ ಇದೇ ರೀತಿಯ ಪ್ರದರ್ಶನ ತೋರುವಂತೆ ಸ್ಫೂರ್ತಿಯ ಮಾತುಗಳನ್ನಾಡಿದರು. ರಿಷಭ್ ಪಂತ್ ಅವರನ್ನು ‘ಪಾಕೆಟ್ ರಾಕೆಟ್’ ಎಂದು ಹೊಗಳಿದರು.
ಪಂದ್ಯ ಗೆದ್ದ ಭಾರತ
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ಹಾರ್ದಿಕ್ ಪಾಂಡ್ಯ ಅವರ ಅಜೇಯ ಅರ್ಧ ಶತಕದ ನೆರವಿನಿಂದ 5 ವಿಕೆಟಿಗೆ 196 ರನ್ ಪೇರಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ಸತತ 2 ಸೋಲು ಕಂಡ ಬಾಂಗ್ಲಾದೇಶದ ಸೆಮಿಫೈನಲ್ ಹಾದಿ ಬಹುತೇಕ ಅಂತ್ಯ ಕಂಡಿತು.
ಇದನ್ನೂ ಓದಿ IND vs AUS Super 8: ಆಸೀಸ್ ವಿರುದ್ಧ ಭಾರತಕ್ಕೆ ಸೋಲು ಖಚಿತ ಎಂದ ಅಭಿಮಾನಿಗಳು; ಕಾರಣವೇನು?
ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಜತೆಗೆ ಬೌಲಿಂಗ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರು. ಡೆತ್ ಓವರ್‌ಗಳಲ್ಲಿ ಸಿಡಿದು ನಿಂತ ಪಾಂಡ್ಯ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತು.
ದಾಖಲೆ ಬರೆದ ಕೊಹ್ಲಿ
ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಕೊಹ್ಲಿ ಬಾಂಗ್ಲಾ ವಿರುದ್ಧ ತುಸು ಚೇತರಿಕೆಯ ಬ್ಯಾಟಿಂಗ್ ಪ್ರದರ್ಶನ ತೋರಿದರು. ಜತೆಗೆ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದರು. 37 ರನ್ ಮಾಡಿದ ಕೊಹ್ಲಿ ವಿಶ್ವಕಪ್ ಟೂರ್ನಿಯಲ್ಲಿ (ಟಿ20 ಮತ್ತು ಏಕದಿನ) 3 ಸಾವಿರ ರನ್ ಪೂರೈಸಿದ ಮೊದಲ ಕ್ರಿಕೆಟಿಗನೆನಿಸಿದರು. ಕಳೆದ ಹಲವು ವರ್ಷಗಳಿಂದ ವಿರಾಟ್ ಕೊಹ್ಲಿ ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ತಂಡಕ್ಕಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಬೆನ್ನೆಲುಬಾಗಿದ್ದಾರೆ.