ನವದೆಹಲಿ: ಭೀಕರ ಕಾರು ಅಪಘಾತಕ್ಕೀಡಾಗಿ ನೋವಿನಿಂದ ನರಳುತ್ತಿದ್ದ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಅವರ ಜೀವ ಉಳಿಸಿ ಮಾನವೀಯತೆ ಮೆರೆದ ಬಸ್ ಚಾಲಕ ಮತ್ತು ಕಂಡಕ್ಟರ್‌ಗೆ ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಸನ್ಮಾನಿಸಿ ಗೌರವಿಸಿದೆ.
ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಅಪಘಾತವಾದ ಕಾರಿನಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅವರನ್ನು ಗೌರವಿಸಲಾಗಿದೆ. ಮೂಲಗಳ ಪ್ರಕಾರ, ರಾಜ್ಯ ಸರ್ಕಾರವು ಕೂಡ ಈ ಇಬ್ಬರನ್ನೂ ಗೌರವಿಸಿದೆ ಎಂದು ವರದಿಯಾಗಿದೆ.
“ರಿಷಭ್ ಪಂತ್ ಜೀವ ಉಳಿಸಿದ ನಮ್ಮ ಸಂಸ್ಥೆಯ ಡ್ರೈವರ್ ಹಾಗೂ ಕಂಡಕ್ಟರ್‌ಗೆ ನಮ್ಮ ಕಚೇರಿಯಲ್ಲಿ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿದ್ದೇವೆ” ಎಂದು ಹರಿಯಾಣ ರಾಜ್ಯ ಸಾರಿಗೆ ನಿಗಮದ ಪಾಣಿಪತ್ ಡಿಪೋದ ಜನರಲ್ ಮ್ಯಾನೇಜರ್ ಕುಲದೀಪ್ ಜಾಂಗ್ರಾ ಹೇಳಿಕೆ ನೀಡಿದ್ದಾರೆ.
“ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದದ್ದನ್ನು ನೋಡಿದ ನಮ್ಮ ಸಂಸ್ಥೆಯ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ತಕ್ಷಣ ಬಸ್ ನಿಲ್ಲಿಸಿ ಅಪಘಾತಕ್ಕೊಳಗಾಗಿದ್ದ ಪಂತ್ಗೆ ನೆರವಾಗಿದ್ದಾರೆ. ಬಳಿಕ ಪಂತ್ ಅವರನ್ನು ಸುರಕ್ಷಿತ ಸ್ಥಳದಲ್ಲಿ ಕೂರಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಪಂತ್ ಜೀವ ಉಳಿಸಿದ್ದಾರೆ” ಎಂದು ಜಾಂಗ್ರಾ ಹೇಳಿದ್ದಾರೆ.
ಶುಕ್ರವಾರ ಮುಂಜಾನೆ ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಪಂತ್ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ನಿವಾಸಕ್ಕೆ ಬರುತ್ತಿದ್ದಾಗ ಅವರ ಕಾರು ಅಪಘಾತಕ್ಕೀಡಾಗಿತ್ತು. ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಟ್ಟು ಕರಕಲಾಗಿತ್ತು. ಸದ್ಯ ಅವರು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ | Rishabh Pant | ನಿಧಾನವಾಗಿ ಕಾರು ಓಡಿಸು; ಪಂತ್ಗೆ ಧವನ್ ಸಲಹೆ ಕೊಟ್ಟ ವಿಡಿಯೊ ಇದೀಗ ಮುನ್ನೆಲೆಗೆ