ನವದೆಹಲಿ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್ ಪಂತ್(Rishabh Pant), ಮುಂದಿನ ವರ್ಷದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡುವ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಪಂತ್ ಫಿಟ್ನೆಸ್(Fitness) ಕುರಿತು ಎನ್ಸಿಎ(NCA) ಮೂಲಗಳು ಮಹತ್ವದ ಅಪ್ಡೇಟ್ ನೀಡಿದೆ.
“ಪಂತ್ ಚೇತರಿಕೆ ಹಂತದಲ್ಲಿದ್ದಾರೆ. ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ. ಗಾಯದ ನಂತರ ಅವರ ಮೊಣಕಾಲು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವ ಆತಂಕವಾಗಿತ್ತು. ಆದರೆ ಪಂತ್ ವ್ಯಾಯಾಮ ಮತ್ತು ಚೇತರಿಕೆ ಕಾಣುವಾಗ ಈ ಆತಂಕ ದೂರವಾಗಿದೆ. ಆದರೂ ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ” ಎಂದು ಎನ್ಸಿಎ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಶೇ.100ರಷ್ಟು ಫಿಟ್ ಆಗಿಲ್ಲ
ಪಂತ್ ಅವರಿಗೆ ಪ್ರತಿ ನಿತ್ಯ ಎನ್ಸಿಎಯಲ್ಲಿ ತರಬೇತಿ ನೀಡಲಾಗುತ್ತದೆ. ಸದ್ಯಕ್ಕೆ ಅವರು ರನ್ನಿಂಗ್ ಮತ್ತು ಭಾರ ಎತ್ತುವ ಮತ್ತು ಕೆಲ ಸಣ್ಣ ಪುಟ್ಟ ಫಿಟ್ನೆಸ್ ಮಾಡುತ್ತಾರೆ. ಶೇ.80ರಷ್ಟು ಫಿಟ್ ಆದಂತೆ ತೋರುತ್ತಿದೆ. ಮುಂದಿನ ವಾರದಿಂದ ಅವರಿಗೆ ಶೇ.100ರ ಪರಿಪೂರ್ಣ ಫಿಟ್ನೆಸ್ನ ತರಬೇತಿ ಆರಂಭಿಸುತ್ತೇವೆ. ಇಲ್ಲಿ ಅವರ ಕ್ರಿಕೆಟ್ ಕಮ್ಬ್ಯಾಕ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಎನ್ಸಿಎ ಮೂಲಗಳು ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ IND vs SA: ವಿಶ್ವಕಪ್ ಬಳಿಕ ಮೊದಲ ಏಕದಿನ ಪಂದ್ಯ ಆಡಲು ಸಜ್ಜಾದ ಭಾರತ
ಬಿಸಿಸಿಐ ಕೂಡ ಪಂತ್ ಅವರ ಫಿಟ್ನೆಸ್ ಮೇಲೆ ತೀವ್ರ ನಿಗಾ ಇರಿಸಿದೆ. ಪ್ರತಿ ಹಂತದ ಟ್ರೈನಿಂಗ್ ಬಳಿಕವೂ ಎನ್ಸಿಎ ಬಳಿ ಅಪ್ಡೇಟ್ ಪಡೆಯುತ್ತಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರೆ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ಸೆನ್ ಸಾಬೀತುಪಡಿಸಬೇಕಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಹೀಗಾಗಿ ಪಂತ್ಗೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಆಡಿದ್ದರೆ ಇದು ಅವರಿಗೆ ಮಹತ್ವದ ಟೂರ್ನಿಯಾಗಲಿದೆ.
ಕೆಲ ದಿನಗಳ ಹಿಂದೆ ಪಂತ್ ಅವರು ಜಿಮ್‌ನಲ್ಲಿ ಬಾರ ಎತ್ತುವ ಮತ್ತು ಇನ್ನು ಕೆಲ ಕಸರತ್ತು ಮಾಡುವ ವಿಡಿಯೊವನ್ನು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಜತೆಗೆ ಎಲ್ಲ ನೋವನ್ನು ಮರೆತು ಮತ್ತೆ ಪುಟಿದೇಳುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಪಂತ್ ಜಿಮ್‌ನಲ್ಲಿ ಫಿಟ್ನೆಸ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಕಂಡ ಅವರ ಅಭಿಮಾನಿಗಳು ನಿಮ್ಮ ಆಗಮನಕ್ಕೆ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದರು.
ಡಿಸೆಂಬರ್ನಲ್ಲಿ ಕಾರು ಅಪಘಾತ
ಕಳೆದ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಡಿಸೆಂಬರ್ ಅಂತ್ಯಕ್ಕೆ ಘಟನೆ ನಡೆದು ಒಂದು ವರ್ಷವಾಗಲಿದೆ. ಅಂದಿನ ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.