ನವದೆಹಲಿ: ಮೂರನೇ ಬಾರಿಗೆ ನಿಧಾನಗತಿಯ ಓವರ್ ಕಾಯ್ದುಕೊಂಡ ತಪ್ಪಿಗೆ ಒಂದು ಪಂದ್ಯದ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ರಿಷಭ್ ಪಂತ್(Rishabh Pant) ಬಿಸಿಸಿಐ(BCCI) ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಆರ್ಸಿಬಿ(RCB) ವಿರುದ್ಧ ನಾನು ಆಡುತ್ತಿದ್ದರೆ ಇಂದು ಪ್ಲೇ ಆಫ್ ಟಿಕೆಟ್ ಪಡೆಯುವ ಎಲ್ಲ ಸಾಧ್ಯತೆಯೂ ಇತ್ತು ಎಂದು ಹೇಳಿದ್ದಾರೆ.
ನಿನ್ನೆ(ಮಂಗಳವಾರ) ಲಕ್ನೋ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಪಂತ್, ‘ಆರ್ಸಿಬಿ ವಿರುದ್ಧ ನಾನು ಮೈದಾನದಲ್ಲಿದ್ದರೆ ನಿರ್ಣಾಯಕ ಪಂದ್ಯವನ್ನು ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದ್ದೆವು ಎಂದು ಹೇಳಿದರು. ಲಕ್ನೋ ವಿರುದ್ಧ ಡೆಲ್ಲಿ ಗೆದ್ದರೂ ಕೂಡ ಪ್ಲೇ ಆಫ್ ಗೇರಲು ಸಾಧ್ಯವಾಗಿಲ್ಲ. ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಡೆಲ್ಲಿ(Delhi Capitals) ಪ್ರದರ್ಶನ ಉತ್ತಮವಾಗಿತ್ತು.
ಮೇ 07, 2024 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿತ್ತು. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದ ಐಪಿಎಲ್ನ ನೀತಿ ಸಂಹಿತೆಯ ಅಡಿಯಲ್ಲಿ ಇದು ಡೆಲ್ಲಿ ತಂಡದ 3ನೇ ಅಪರಾಧವಾಗಿತ್ತು. ಹೀಗಾಗಿ ತಂಡದ ನಾಯಕ ಪಂತ್ಗೆ 30 ಲಕ್ಷ ರೂ.ಗಳ ದಂಡ ಮತ್ತು ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಜತೆಗೆ ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ಪ್ಲೇಯಿಂಗ್ ಇಲೆವೆನ್ ನ ಉಳಿದ ಸದಸ್ಯರಿಗೆ ತಲಾ 12 ಲಕ್ಷ ರೂಪಾಯಿ ಅಥವಾ ಆಯಾ ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ IPL 2024: ಲಕ್ನೋಗೆ ಸೋಲು; ಪ್ಲೇ ಆಫ್ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್
ಲಕ್ನೋ ವಿರುದ್ಧ ಗೆಲುವು
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 204 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 9 ವಿಕೆಟ್ ನಷ್ಟಕ್ಕೆ 189 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಡೆಲ್ಲಿಯ ಪಿಚ್ನಲ್ಲಿ ಲಕ್ನೊ ತಂಡಕ್ಕೆ ಇದು ದೊಡ್ಡ ಮೊತ್ತವಾಗಿರಲಿಲ್ಲ. ಆದರೆ, ಆ ತಂಡದ ಬ್ಯಾಟರ್ಗಳು ಗೆಲುವಿಗಾಗಿ ಹೆಚ್ಚಿನ ಉತ್ಸಾಹ ತೋರಲಿಲ್ಲ. ಇಶಾಂತ್ ಶರ್ಮಾ (34 ರನ್ಗೆ 3 ವಿಕೆಟ್) ಮತ್ತು ಡೆಲ್ಲಿಯ ಬೌಲರ್ಗಳ ಘಾತಕ ದಾಳಿಗೆ ಲಕ್ನೋ ಬ್ಯಾಟರ್ಗಳು ಒಬ್ಬೊಬ್ಬರಾಗಿಯೇ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ (27 ಎಸೆತಕ್ಕೆ 61 ರನ್) ಹಾಗೂ ಅರ್ಶದ್ ಖಾನ್ (33 ಎಸೆತಕ್ಕೆ 58 ರನ್) ಅವರ ಹೋರಾಟದಿಂದಾಗಿ ಗುರಿಯ ಸನಿಹಕ್ಕೆ ಬಂದು ಮರ್ಯಾದೆ ಉಳಿಸಿಕೊಂಡಿತು. ಕ್ವಿಂಟನ್ ಡಿ ಕಾಕ್ (12), ಕೆ. ಎಲ್ ರಾಹುಲ್ (05), ಮಾರ್ಕಸ್ ಸ್ಟೊಯಿನಿಸ್ (05), ದೀಪಕ್ ಹೂಡ (0) ಆಯುಷ್ ಬದೋನಿ (06), ಅವರ ಅಸಮರ್ಥತೆ ತಂಡವನ್ನು ಸೋಲಿನ ಸುಳಿಗೆ ತಳ್ಳಿತು.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 13 | 9 | 3 | 19 (+1.428) |
ರಾಜಸ್ಥಾನ್ ರಾಯಲ್ಸ್ | 12 | 8 | 4 | 16 (+0.349) |
ಚೆನ್ನೈ | 13 | 7 | 6 | 14 (+0.528) |
ಹೈದರಾಬಾದ್ | 12 | 7 | 5 | 14 (+0.406) |
ಡೆಲ್ಲಿ | 14 | 7 | 7 | 14 (-0.377) |
ಆರ್ಸಿಬಿ | 13 | 6 | 7 | 12 (+0.387) |
ಲಕ್ನೋ | 13 | 6 | 7 | 12 (-0.787) |
ಗುಜರಾತ್ | 13 | 5 | 7 | 11 (-1.063) |
ಮುಂಬೈ | 13 | 4 | 9 | 8 (-0.271) |
ಪಂಜಾಬ್ | 12 | 4 | 8 | 8 (-0.423) |