ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಭಾರತ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್(Paris Olympics) ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯದಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ 89.34 ಮೀ. ದೂರ ಜಾವೆಲಿನ್ ಎಸೆದು ಫೈನಲ್ ಪ್ರವೇಶಿಸಿರುವ ನೀರಜ್, ನಾಳೆ(ಗುರುವಾರ) ನಡೆಯುವ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಫೈನಲ್ನಲ್ಲಿ ನೀರಜ್ಗೆ ಬೆಂಬಲ ಸೂಚಿಸುವ ಅಭಿಮಾನಿಗಳಿಗೆ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಭಾರೀ ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ತಮ್ಮ ಅಧಿಕೃತ ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡಿರುವ ಪಂತ್, ನೀರಜ್ ಚೋಪ್ರಾ ನಾಳೆ (ಆಗಸ್ಟ್ 8) ಚಿನ್ನದ ಪದಕ ಗೆದ್ದರೆ, ಟ್ವೀಟ್ ಅನ್ನು ಅತಿಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡುವ ಅದೃಷ್ಟಶಾಲಿ ವಿಜೇತರಿಗೆ ನಾನು 1,00,089 ರೂಪಾಯಿಗಳನ್ನು ನೀಡುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.
ಇದು ಮಾತ್ರವಲ್ಲದೆ ಉಳಿದ ಟಾಪ್ 10 ಜನರಿಗೆ ವಿಮಾನ ಟಿಕೆಟ್‌ಗಳನ್ನು ನೀಡಲಾಗುವುದು. ನನ್ನ ಸಹೋದರನಿಗೆ ಭಾರತ ಮತ್ತು ಪ್ರಪಂಚದ ಹೊರಗಿನಿಂದ ಬೆಂಬಲಿಸೋಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನೀರಜ್ಗೆ ಬೆಂಬಲ ಸೂಚಿಸಲು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ Paris Olympics: ಐತಿಹಾಸಿಕ ಪದಕ ಗೆಲ್ಲಲಿ ಮೀರಾಬಾಯಿ; ಇಂದು ಬಲಾಢ್ಯರ ಜತೆ ಸ್ಪರ್ಧೆ
ಮತ್ತೊಂದೆಡೆ ರಿಷಭ್ ಪಂತ್ ಅವರ ‘ಎಕ್ಸ್’ ಖಾತೆ ಯಾರೋ ಹ್ಯಾಕ್ ಮಾಡಿ ಈ ರೀತಿಯ ಟ್ವೀಟ್ ಮಾಡಿದ್ದಾರೆ ಎನ್ನುವ ಸಂಶಯ ಕೂಡ ಹುಟ್ಟಿಕೊಂಡಿದೆ. ಏಕೆಂದರೆ ಒಂದೇ ಸಮಯಕ್ಕ ಇವರ ಟ್ವಿಟರ್ ಎಕ್ಸ್ ಖಾತೆಯಿಂದ ಪ್ಯಾರಿಸ್ ಒಲಿಂಪಿಕ್ಸ್ಗೆ ಸಂಬಂಧಿಸಿದಂತೆ 2 ಟ್ವೀಟ್ಗಳನ್ನು ಮಾಡಲಾಗಿದೆ. ಹೀಗಾಗಿ ಅನುಮಾನಕ್ಕೆ ಕಾರಣವಾಗಿದೆ.
‘ಬಿ’ ವಿಭಾಗದ ಅರ್ಹತಾ ಸುತ್ತಿನಲ್ಲಿ ಕಣಕ್ಕಿಳಿದ ನೀರಜ್ ತಮ್ಮ ಮೊದಲ ಎಸೆತವನ್ನೇ 89.34 ಮೀ. ದೂರ ಎಸೆದು ನೇರವಾಗಿ ಫೈನಲ್ ಪ್ರವೇಶಿಸಿದರು. ಇವರ ಜತೆ ಪಾಕಿಸ್ತಾನದ ಅರ್ಷದ್ ನದೀಮ್ 86.59 ಮೀ. ಸಾಧನೆಯೊಂದಿಗೆ ಫೈನಲ್ ಟಿಕೆಟ್ ಪಡೆದರು.
89.34 ಮೀ. ದೂರ ಜಾವೆಲಿನ್ ಎಸೆದದ್ದು ನೀರಜ್ ಅವರ 2ನೇ ಶ್ರೇಷ್ಠ ಸಾಧನೆಯಾಗಿದೆ. ಅವರ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದರು. ಟೋಕಿಯೊದಲ್ಲಿ 87.58 ಮೀ. ಸಾಧನೆಯೊಂದಿಗೆ ಚಿನ್ನ ಗೆದ್ದಿದ್ದರು. ಆಗಸ್ಟ್ 8ರಂದು ನಡೆಯುವ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಇರಾದೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ‘ಎ’ ವಿಭಾಗದಲ್ಲಿ ಜರ್ಮನಿಯ ಜೂಲಿಯನ್ ವೆಬರ್ 87.76 ಮೀ. ದೂರ ಎಸೆದು ಮೊದಲ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು.