ಮುಂಬಯಿ: ಚೆಕ್ ಬೌನ್ಸ್ ಪ್ರಕರಣದಲ್ಲಿ(Robin Uthappa cheque bounce case) ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್ ಉತ್ತಪ್ಪ(Robin Uthappa) ಅವರಿಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಜಾಮೀನು ರಹಿತ ವಾರೆಂಟ್ಗೆ ಮುಂಬೈ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಅವರು ನಿರಾಳರಾಗಿದ್ದಾರೆ. ಉತ್ತಪ್ಪ ವಿರುದ್ಧದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.
ನ್ಯಾಯಮೂರ್ತಿ ನೀಲಾ ಘೋಖಲೆ ನೇತೃತ್ವದ ಪೀಠ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಉತ್ತಪ್ಪ ಪರ ವಕೀಲರು ಸೆಪ್ಟೆಂಬರ್ 6ರೊಳಗೆ ವಿಚಾರಣೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್ಗೆ ತಡೆ ನೀಡಲಾಗಿದೆ.
ರಾಬಿನ್ ಉತ್ತಪ್ಪ ಮಧ್ಯವರ್ತಿ ಕಂಪನಿ ಮೂಲಕ ಸೆನಾಟರ್ ಪ್ರವೇಟ್ ಲಿಮಿಟೆಡ್ ಕಂಪನಿ ಜತೆ ಉಡುಪುಗಳ ರಾಯಭಾರಿಯಾಗಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಂಪನಿ ಜತೆ ಉತ್ತಪ್ಪ ಸಂಬಂಧ ಕಡಿದುಕೊಂಡಿದ್ದರು. ಆದರೆ, ಆ ಬಳಿಕ ನಡೆದ ಪತ್ರ ವ್ಯವಹಾರಗಳು ಉತ್ತಪ್ಪ ಗಮನಕ್ಕೆ ಬಂದಿರಲಿಲ್ಲ. ಸಮನ್ಸ್ ಮತ್ತು ವಾರಂಟ್‌ಗಳು ಸೆಂಟಾರಸ್‌ನ ನೋಂದಾಯಿತ ಕಚೇರಿಗೆ ಹೋಗುತ್ತಿದ್ದವು. ಹೀಗಾಗಿ ಉತ್ತಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಉತ್ತಪ್ಪ ಅವರು ಏಪ್ರಿಲ್ 28, 2024 ರಂದು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ಮಾಡಿದಾಗ ಮಾತ್ರ ಬಾಕಿ ಇರುವ ಘೋಷಣೆ ಮತ್ತು ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದು ತಿಳಿದುಕೊಂಡಿದ್ದಾರೆ.
ಇದನ್ನೂ ಓದಿ Viral Video: ಉತ್ತಪ್ಪಮ್ ಮೇಲೆ ಮೂಡಿದ ಕಲಾಕೃತಿ; ತಿನ್ನಲು ಮನಸ್ಸೇ ಬರದು ಎಂದ ನೆಟ್ಟಿಗರು
ನಂತರ ಉತ್ತಪ್ಪ ಜಾಮೀನು ರಹಿತ ವಾರೆಂಟ್ ರದ್ದುಗೊಳಿಸುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಅವರ ವಿನಂತಿಯನ್ನು ತಿರಸ್ಕರಿಸಲಾಗಿತ್ತು. ಸದ್ಯ ಉತ್ತಪ್ಪ ಜಾಮೀನು ರಹಿತ ಬಂಧನ ವಾರೆಂಟ್ನಿಂದ ಮುಕ್ತರಾಗಿದ್ದಾರೆ.
ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್. 2007 ರ ಟಿ-20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್ ಶೂಟೌಟ್ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್ ರೇಟ್ ನೊಂದಿಗೆ 249 ರನ್ ಗಳಿಸಿದ್ದಾರೆ.
2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್ ನಲ್ಲಿ ಮಂಬಯಿ, ಆರ್ ಸಿಬಿ, ಕೆಕೆಆರ್, ರಾಜಸ್ಥಾನ್ ರಾಯಲ್ಸ್, ಸಿಎಸ್ ಕೆ ಪರವಾಗಿ ಆಡಿದ್ದರು. ಐಪಿಎಲ್ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್ ಗಳಿಸಿದ್ದಾರೆ.