ದುಬೈ: ಟೀಮ್ ಇಂಡಿಯಾದ ಮಾಜಿ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ(Robin Uthappa) ಯುಎಇಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಲೀಗ್ ಟಿ20ಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದಾರೆ.
ಸೋಮವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ದುಬೈ ಕ್ಯಾಪಿಟಲ್ಸ್ ಮತ್ತು ಗಲ್ಫ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಉತ್ತಪ್ಪ 46 ಎಸೆತಗಳಲ್ಲಿ 79 ರನ್ ಬಾರಿಸುವ ಮೂಲಕ ಮಿಂಚಿದ್ದಾರೆ. ಆದರೆ ಈ ಪಂದ್ಯದಲ್ಲಿ ಗಲ್ಫ್ ಜೈಂಟ್ಸ್ ತಂಡ 6 ವಿಕೆಟ್ ಗೆಲುವು ಸಾಧಿಸಿತು.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಉತ್ತಪ್ಪ, ಗಲ್ಫ್ ಜೈಂಟ್ಸ್ ತಂಡದ ಬೌಲರ್ಗಳನ್ನು ಕಾಡಿದರು. 10 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 79 ರನ್ ಬಾರಿಸಿದರು. ಸದ್ಯ ಅವರು 2 ಪಂದ್ಯಗಳಿಂದ 122 ರನ್ ಕಲೆಹಾಕಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದುಬೈ ಕ್ಯಾಪಿಟಲ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಗಲ್ಫ್ ಜೈಂಟ್ಸ್ 19 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 183 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ | Team India | ತಮ್ಮ ಶತಕದ ಸಾಧನೆಯ ಹಿಂದೆ ಕುಮಟಾದ ಪ್ರತಿಭೆಯ ಪಾತ್ರವಿದೆ ಎಂದ ವಿರಾಟ್ ಕೊಹ್ಲಿ; ಯಾರು ಅವರು?