Site icon Vistara News

Robin Uthappa: ಮಾನಸಿಕ ಖಿನ್ನತೆಯ ಅನುಭವಗಳನ್ನು ಬಿಚ್ಚಿಟ್ಟ ಭಾರತ ತಂಡದ ಮಾಜಿ ಕ್ರಿಕೆಟಿಗ

Robin Uthappa

Robin Uthappa: Robin Uthappa opens up about battle with clinical depression

ಬೆಂಗಳೂರು: ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್​ ಉತ್ತಪ್ಪ(Robin Uthappa) ಹಿಂದೆ ತಾನು ಖಿನ್ನತೆಯಿಂದ(Depression) ಬಳಲಿ ಆತ್ಮಹತ್ಯೆಗೆ ಮುಂದಾಗಿ ಇದರಿಂದ ಹೊರಬಂದ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಚಿಕಿತ್ಸೆ ಪಡೆಯುವುದು ಹೇಗೆ ಎಂಬಹುದನ್ನು ತಿಳಿಸುವ ಉದ್ದೇಶದಿಂದ ಅವರು ಈ ವಿಚಾರವನ್ನು ತಿಳಿಸಿದ್ದಾರೆ.

ಟ್ವಿಟರ್​ ಎಕ್ಸ್​ ವಿಡಿಯೊದಲ್ಲಿ ಮಾತನಾಡಿದ ಉತ್ತಪ್ಪ, ಖಿನ್ನತೆಯೊಂದಿಗಿನ ತನ್ನ ಸಮರವು ಕ್ರಿಕೆಟ್ ಮೈದಾನದಲ್ಲಿ ತಾನು ಎದುರಿಸಿದ ಯಾವುದೇ ಸವಾಲುಗಳಿಗಿಂತ ಹೆಚ್ಚಿನದಾಗಿತ್ತು ಎಂದು ಹೇಳಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ನಾನು ಹಲವು ಯುದ್ಧಗಳನ್ನು ಎದುರಿಸಿದ್ದೇನೆ, ಆದರೆ ಅವು ಯಾವುದೂ ನಾನು ಖಿನ್ನತೆಯೊಂದಿಗೆ ಹೋರಾಡಿದ ಯುದ್ಧಕ್ಕಿಂತ ಕಠಿಣವಾಗಿರಲಿಲ್ಲ. ಜೀವನದಲ್ಲಿ ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲದಿದ್ದಾಗ ಆತ್ಮಹತ್ಯೆಯ ಯೋಚನೆಗಳು ತಲೆಗೆ ಬರುತ್ತದೆ. ಆ ಕತ್ತಲೆಯಿಂದ ಹೊರಬರಲು ಸ್ವಲ್ಪ ಸಹಾಯ ಬೇಕಾಗುತ್ತದೆ ಎಂದು ಹೇಳುವ ಮೂಲಕ ಉತ್ತಪ್ಪ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

“ಇತ್ತೀಚೆಗೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಗ್ರಹಾಮ್ ತೋರ್ಪ್ ಮತ್ತು ಭಾರತದ ಡೇವಿಡ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೇಳಿದ್ದೇವೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)ನ ಬೆನ್ನೆಲುಬು ಆಗಿದ್ದ ವಿ.ಬಿ. ಚಂದ್ರಶೇಖರ್ ಸರ್ ಸಾವನ್ನೂ ಕೂಡ ನಾವು ನೋಡಿದ್ದೇವೆ. ಇದೇ ಮಾನಸಿಕ ಸ್ಥಿತಿಯನ್ನು ನಾನೂ ಅನುಭವಿಸಿದ್ದೇನೆ. ಇದು ಉತ್ತಮ ವಿಷಯವಲ್ಲ. ನಮ್ಮನ್ನು ಪ್ರೀತಿಸುವ ಜನರಿಗೆ ನಾವು ಹೊರೆಯಾಗುತ್ತೇವೆ ಎಂಬ ಭಾವನೆ ನಮ್ಮಲ್ಲಿ ಬರುತ್ತದೆ” ಎಂದು 38 ವರ್ಷದ ಉತ್ತಪ್ಪ ಹೇಳಿದರು.

ಇದನ್ನೂ ಓದಿ Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್.‌ 2007 ರ ಟಿ-20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್‌ ಶೂಟೌಟ್​ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್‌ ರೇಟ್‌ ನೊಂದಿಗೆ 249 ರನ್‌ ಗಳಿಸಿದ್ದಾರೆ.

2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್​ನಲ್ಲಿ ಮಂಬಯಿ, ಆರ್​ಸಿಬಿ, ಕೆಕೆಆರ್‌, ರಾಜಸ್ಥಾನ್‌ ರಾಯಲ್ಸ್‌, ಸಿಎಸ್‌ ಕೆ ಪರವಾಗಿ ಆಡಿದ್ದರು. ಐಪಿಎಲ್‌ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್‌ ಗಳಿಸಿದ್ದಾರೆ.

Exit mobile version