ಪರ್ತ್ : ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾಲಿ ನಾಯಕ ರೋಹಿತ್ ಶರ್ಮ ನಡುವೆ ಒಳಜಗಳವಿದೆ ಎಂಬುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಅದು ಫ್ಯಾನ್ ವಾರ್ ಮಟ್ಟಕ್ಕೆ ಮುಂದುವರಿದಿತ್ತು. ನಂತರ ಈ ಇಬ್ಬರು ಆಟಗಾರರು ಮೈದಾನ ಹಾಗೂ ಡ್ರೆಸಿಂಗ್ ರೂಮ್‌ನ ತಮ್ಮ ವರ್ತನೆಗಳ ಮೂಲಕ ಹಾಗೆನೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ಹೀಗಾಗಿ ಈ ಸ್ಟಾರ್ ಬ್ಯಾಟರ್‌ಗಳ ಫ್ಯಾನ್ ವಾರ್ ಕೂಡ ಕೊನೆಗೊಂಡಿತ್ತು. ಇದೀಗ ಅವರಿಬ್ಬರು ನಾವು ಎಲ್ಲದರಲ್ಲೂ ಒಂದೇ ಎಂಬುದನ್ನು ತೋರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎಂಬ ಹೊಸ ಹಾಸ್ಯವೊಂದು ಸೃಷ್ಟಿಯಾಗಿದೆ. ಅದಕ್ಕೆ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆಯ ಕಳಪೆ ಫೀಲ್ಡಿಂಗ್.
ಪಂದ್ಯದ ಎರಡನೇ ಇನಿಂಗ್ಸ್‌ನ ೧೨ ಹಾಗೂ ೧೩ನೇ ಓವರ್‌ನಲ್ಲಿ ಈ ಮಿಸ್ ಫೀಲ್ಡಿಂಗ್‌ಗಳು ನಡೆದಿವೆ. ಆರ್. ಅಶ್ವಿನ್ ಎಸೆದ ಇನಿಂಗ್ಸ್‌ನ ೧೨ನೇ ಓವರ್‌ನ ೫ನೇ ಎಸೆತದಲ್ಲಿ ಏಡೆನ್ ಮಾರ್ಕ್ರಮ್ ದೊಡ್ಡ ಹೊಡೆತ ಬಾರಿಸಲು ಮುಂದಾಗಿದ್ದರು. ಅದು ವಿರಾಟ್ ಕೊಹ್ಲಿಗೆ ಸುಲಭ ಕ್ಯಾಚ್ ಅಗಿತ್ತು. ಆದರೆ, ಎದ್ದು ಬಿದ್ದು ವಿರಾಟ್ ಆ ಚೆಂಡನ್ನು ನೆಲಕ್ಕೆ ಚೆಲ್ಲಿದರು. ೩೬ ರನ್‌ಗಳಿಗೆ ಜೀವದಾನ ಪಡೆದ ಮಾರ್ಕ್ರಮ್ ಅರ್ಧ ಶತಕ ಬಾರಿಸಿ ದಕ್ಷಿಣ ಆಫ್ರಿಕಾದ ಗೆಲುವಿಗೆ ಕಾರಣರಾದರು.
ವೇಗಿ ಮೊಹಮ್ಮದ್ ಶಮಿ ೧೩ನೇ ಓವರ್ ಎಸೆದಿದ್ದರು. ಈ ಓವರ್‌ನ ಐದನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ಬ್ಯಾಟ್‌ಗೆ ತಾಗಿದ ಚೆಂಡು ರೋಹಿತ್ ಶರ್ಮ ಅವರ ಬಳಿಗೆ ತೆರಳಿದೆ. ಬ್ಯಾಟರ್‌ಗಳಿಬ್ಬರು ರನ್‌ಗಾಗಿ ಓಡಲು ಮುಂದಾಗಿ ಗೊಂದಲಕ್ಕೆ ಒಳಗಾಗಿದ್ದಾರೆ. ಅದು ರೋಹಿತ್ ಪಾಲಿಗೆ ಸುಲಭ ರನ್ ಔಟ್ ಮಾಡುವ ಅವಕಾಶವಾಗಿತ್ತು. ಆದರೆ ರೋಹಿತ್ ಅದನ್ನು ಕಳೆದುಕೊಂಡರು.
ಈ ಎರಡು ಕಳಪೆ ಫೀಲ್ಡಿಂಗ್ ಪ್ರಸಂಗಗಳನ್ನು ಹಿಡಿದುಕೊಂಡು ಕ್ರಿಕೆಟ್ ಅಭಿಮಾನಿಗಳು ರೋಹಿತ್ ಹಾಗೂ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ್ದಾರೆ. ಮಿಸ್ ಫೀಲ್ಡಿಂಗ್‌ನಲ್ಲೂ ನಮ್ಮಿಬ್ಬರ ನಡುವೆ ಗಲಾಟೆ ಇಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ | IPL 2023| ಆರ್‌ಸಿಬಿ ಬಳಗ ಸೇರಲಿದ್ದಾರೆ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್, ಯಾರವರು?