Site icon Vistara News

IND vs WI: ರೋಹಿತ್​, ಜೈಸ್ವಾಲ್​ ಅರ್ಧಶತಕ; ಉತ್ತಮ ರನ್​ ಕಲೆಹಾಕಿದ ಭಾರತ

Another 100-run partnership rohit sharma and yashasvi jaiswal

ಪೋರ್ಟ್‌ ಆಫ್ ಸ್ಪೇನ್‌: ರೋಹಿತ್​ ಶರ್ಮ(80) ಮತ್ತು ಯಶಸ್ವಿ ಜೈಸ್ವಾಲ್(57)​ ಅವರು ಅಮೋಘ ಅರ್ಧಶತಕದ ಬ್ಯಾಟಿಂಗ್​ ಪರಾಕ್ರಮದಿಂದ ವೆಸ್ಟ್​ ಇಂಡೀಸ್​ ವಿರುದ್ಧದ ದ್ವಿತೀಯ ಟೆಸ್ಟ್​ನ(IND vs WI) ಮೊದಲ ದಿನ ಭಾರತ ತಂಡ ಉತ್ತಮ ಮೊತ್ತ ಕಲೆಹಾಕಿದೆ. ಸದ್ಯ 38 ಓವರ್​ಗೆ 3 ವಿಕೆಟ್​ ಕಳೆದುಕೊಂಡು 155 ರನ್​ ಗಳಿಸಿ ಬ್ಯಾಟಿಂಗ್​ ನಡೆಸುತ್ತಿದೆ.

ಪೋರ್ಟ್‌ ಆಫ್ ಸ್ಪೇನ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ನಲ್ಲಿ ಗುರುವಾರ ಆರಂಭವಾದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತಕ್ಕೆ ಜೈಸ್ವಾಲ್​ ಮತ್ತು ರೋಹಿತ್​ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್​ಗೆ 139 ರನ್​ಗಳ ಕೊಡುಗೆ ನೀಡಿದರು. ಉಭಯ ಆಟಗಾರರ ಮೊದಲ ಪಂದ್ಯದ ಬ್ಯಾಟಿಂಗ್​ ಪ್ರದರ್ಶನ ಈ ಪಂದ್ಯದಲ್ಲಿಯೂ ಕಂಡುಬಂದಿತು.

ಭೋಜನ ವಿರಾಮದ ವೇಳೆಗೆ ಉಭಯ ಆಟಗಾರರು ಅರ್ಧಶತಕ ಪೂರ್ತಿಗೊಳಿಸಿದ್ದರು. ಆದರೆ ಭೋಜನ ಮುಗಿಸಿ ಬಂದ ಜೈಸ್ವಾಲ್​ 57 ರನ್​ಗೆ ಆಟ ಮುಗಿಸಿದರು. ಬಿರುಸಿನ ಬ್ಯಾಟಿಂಗ್​ ನಡೆಸುತ್ತಿದ್ದ ಜೈಸ್ವಾಲ್(yashasvi jaiswal)​ ಹೋಲ್ಡರ್​ಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಆದರೆ ರೋಹಿತ್(rohit sharma)​ ಎಚ್ಚರಿಕೆ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೋಹಿತ್​(80) ರನ್​ ಗಳಿಸಿ 20 ರನ್​ ಅಂತರದಲ್ಲಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು. ಶುಭಮನ್​ ಗಿಲ್​ ಅವರು 10 ರನ್​ ಔಟಾಗಿ ಮತ್ತೊಮ್ಮೆ ನಿರಾಶೆ ಮೂಡಿಸಿದರು. ಮೊದಲ ಪಂದ್ಯದಲ್ಲಿ 6 ರನ್​ ಗಳಿಸಿದ್ದರು. ಕೊಹ್ಲಿ ಮತ್ತು ರಹಾನೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

500ನೇ ಪಂದ್ಯ ಆಡಿದ ಕೊಹ್ಲಿ

ವಿಂಡೀಸ್​ ವಿರುದ್ಧ ಬ್ಯಾಟಿಂಗ್​ಗೆ ಇಳಿಯುವ ಮೂಲಕ ವಿರಾಟ್​ ಕೊಹ್ಲಿ(virat kohli) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500 ಪಂದ್ಯಗಳನ್ನಾಡಿದ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು. ಈ ಸಾಧನೆ ಮಾಡಿ ಭಾರತದ ನಾಲ್ಕನೇ ಆಟಗಾರ ಮತ್ತು ವಿಶ್ವದ 10ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ಈ ಸಾಧನೆ ಮಾಡಿದ್ದು ಕೇವಲ ಮೂವರು ಆಟಗಾರರು ಮಾತ್ರ. ಭಾರತ ಪರ ಈ ಸಾಧನೆ ಮಾಡಿದ ಮೊದಲ ಆಟಗಾರನೆಂದರೆ ಸಚಿನ್​ ತೆಂಡೂಲ್ಕರ್​(sachin tendulkar). ಅವರು 664 ಪಂದ್ಯಗಳನ್ನು ಆಡಿದ್ದಾರೆ. ಮಹೇಂದ್ರ ಸಿಂಗ್​ ಧೋನಿ(ms dhoni) ದ್ವಿತೀಯ ಸ್ಥಾನದಲ್ಲಿದ್ದು ಅವರು 538 ಪಂದ್ಯ ಆಡಿದ್ದಾರೆ. ಮೂರನೇ ಸ್ಥಾನದಲ್ಲಿ ಪ್ರಸ್ತುತ ಭಾರತ ತಂಡದ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ ಕಾಣಿಸಿಕೊಂಡಿದ್ದಾರೆ. ದ್ರಾವಿಡ್​ 509 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಐತಿಹಾಸಿಕ ಪಂದ್ಯ

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ನೂರನೇ ಟೆಸ್ಟ್​ ಪಂದ್ಯ ಇದಾಗಿದೆ. ವಿಂಡೀಸ್​ನ ಕೆಲ ಮಾಜಿ ದಿಗ್ಗಜ ಆಟಗಾರರು ಈ ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ ಸಾಕ್ಷಿಯಾಗಿ ಎರಡೂ ತಂಡಗಳ ಆಟಗಾರರನ್ನು ವಿಶೇಷವಾಗಿ ಸ್ವಾಗತಿಸಿದರು. ಉಭಯ ತಂಡಗಳ ಮಧ್ಯೆ ಮೊದಲ ಟೆಸ್ಟ್ ಮುಖಾಮುಖಿ ನಡೆದದ್ದು 1948-49ರಲ್ಲಿ. ಐದು ಪಂದ್ಯಗಳ ಸರಣಿ ಇದಾಗಿತ್ತು. ಈ ಸರಣಿಯನ್ನು ವಿಂಡೀಸ್​ 1-0 ಅಂತರದಿಂದ ಗೆದ್ದು ಬೀಗಿತ್ತು. ಈ ಸರಣಿಗೆ ಭಾರತ ಆತಿಥ್ಯ ವಹಿಸಿಕೊಂಡಿತ್ತು. ಭಾರತ ತಂಡ ವಿಂಡೀಸ್​ ವಿರುದ್ಧ ಮೊತ್ತ ಮೊದಲ ಟೆಸ್ಟ್​ ಸರಣಿ ಗೆದ್ದಿದ್ದು 1970ರಲ್ಲಿ, ವಿಂಡೀಸ್​ ನೆಲದಲ್ಲೇ ಭಾರತ ಮೊದಲ ಗೆಲುವು ದಾಖಲಿಸಿತ್ತು.

ಇದನ್ನೂ ಓದಿ IND vs WI: ನೂತನ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡ ವಿರಾಟ್​ ಕೊಹ್ಲಿ

ಮುಖೇಶ್ ಕುಮಾರ್​ ಪದಾರ್ಪಣೆ

ಶಾರ್ದೂಲ್​ ಠಾಕೂರ್ ಅವರು ಗಾಯಗೊಂಡ ಕಾರಣ ಈ ಪಂದ್ಯಕ್ಕೆ ಮುಖೇಶ್​ ಕುಮಾರ್​ ಅವರಿಗೆ ಅವಕಾಶ ನೀಡಲಾಯಿತು. ಈ ಮೂಲಕ ಮುಖೇಶ್​ ಕುಮಾರ್​ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಮುಖೇಶ್ ಕುಮಾರ್​ಗೆ ಈ ಪಂದ್ಯ ಸ್ಮರಣೀಯವಾಗಲಿದೆ. ಏಕೆಂದರೆ ಭಾರತ ಮತ್ತು ವೆಸ್ಟ್​​ ಇಂಡೀಸ್​ ನಡುವಣ 100ನೇ ಟೆಸ್ಟ್​ ಪಂದ್ಯದಲ್ಲೇ ಪದಾರ್ಪಣೆ ಮಾಡಿದ್ದು ಅವರಿಗೆ ವಿಶೇಷವಾಗಿರಲಿದೆ. ಬಿಹಾರದಲ್ಲಿ ಜನಿಸಿದ ಮುಖೇಶ್ ಕುಮಾರ್​ ಯಾವುದೇ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್​ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಕಠಿಣ ಪರಿಶ್ರಮದ ಮೂಲಕವೇ ಬೆಳೆದು ಬಂದ ಪ್ರತಿಭೆ.

Exit mobile version