Site icon Vistara News

IND vs SA: ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಹರಿಣ ಪಡೆಗೆ ಸೋಲಿನ ಪಂಚ್​ ನೀಡೀತೇ ಭಾರತ?

Rohit Sharma & Shubman Gill during practice session

ಜೊಹಾನ್ಸ್​ಬರ್ಗ್​: ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದ ಸೋಲಿನ ಬಳಿಕ ರೋಹಿತ್​ ಶರ್ಮ(rohit sharma) ಅವರು ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲು ಸಜ್ಜಾಗಿ ನಿಂತಿದ್ದಾರೆ. ನಾಳೆಯಿಂದ(ಮಂಗಳವಾರ) ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ(IND vs SA) ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಕಣಕ್ಕಿಳಿಯಲಿದ್ದಾರೆ. ಕೊಹ್ಲಿ, ಬುಮ್ರಾಗೂ ಇದು ವಿಶ್ವಕಪ್​ ಬಳಿಕ ಮೊದಲ ಪಂದ್ಯವಾಗಿದೆ.

ಎಲ್ಲ ಸೋಲಿನ ಕಹಿಯನ್ನು ಮರೆತು ಮುಂದುವರಿಯಬೇಕು ಎಂದು ಈಗಾಗಲೇ ಕೋಚ್​ ರಾಹುಲ್​ ದ್ರಾವಿಡ್​ ಆಟಗಾರರಿಗೆ ಸಲಹೆ ನೀಡಿದ್ದಾರೆ. ಅದರಂತೆ ಭಾರತೀಯ ಆಟಗಾರರು ಭವಿಷ್ಯದ ಪಂದ್ಯಗಳ ಮೇಲೆ ಗಮನಹರಿಸಿ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಕಳೆದ 31 ವರ್ಷಗಳಿಂದ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್​ ಸರಣಿ ಆಡಿದ್ದರೂ ಕೂಡ ಇದುವರೆಗೂ ಒಂದೇ ಒಂದು ಸರಣಿ ಗೆಲುವು ಕಂಡಿಲ್ಲ. ಸಚಿನ್​, ಧೋನಿ, ದ್ರಾವಿಡ್​, ಕೊಹ್ಲಿ, ಗಂಗೂಲಿ ಹೀಗೆ ಘಟಾನುಘಟಿ ನಾಯಕರು ಪ್ರಯತ್ನ ಪಟ್ಟಿದ್ದರೂ ಇವರಿಂದ ಸಾಧ್ಯವಾಗಿರಲಿಲ್ಲ. ರೋಹಿತ್​ ಶರ್ಮ ಅವರು ಈಗಾಗಲೇ ಹಲವು ದೇಶಗಳ ವಿರುದ್ಧ ಟೆಸ್ಟ್​ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲ ಬಾರಿ. ಇವರ ನಾಯಕತ್ವದಲ್ಲಾದರೂ ಭಾರತ ಚೊಚ್ಚಲ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡೀತೇ ಎಂಬುದು ಸರಣಿಯ ಕುತೂಹಲ.

ನಿಂತು ಆಡಿದರೆ ಲಾಭ

ಭಾರತದ ಬ್ಯಾಟಿಂಗ್‌ ಲೈನ್‌ಅಪ್‌ ಉತ್ತಮ ಮಟ್ಟದಲ್ಲೇ ಇದೆ. ಆದರೆ ಎಲ್ಲರೂ ನಿಂತು ಆಡುವುದು ಮುಖ್ಯ. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 350 ರನ್‌ ಪೇರಿಸುವುದು ಅಗತ್ಯ. ಆದರೆ ಈ 350 ರನ್ನನ್ನು ಒಂದೇ ದಿನದಲ್ಲಿ ರಾಶಿ ಹಾಕುವ ಬದಲು ಒಂದೂವರೆ-ಒಂದು ಮುಕ್ಕಾಲು ದಿನದ ಅವಧಿಯಲ್ಲಿ ಪೇರಿಸಿದರೆ ಲಾಭ ಹೆಚ್ಚು. ಅರ್ಥಾತ್‌, ರನ್‌ ಗಳಿಸುವುದರ ಜತೆಗೆ ಕ್ರೀಸನ್ನೂ ಆಕ್ರಮಿಸಿಕೊಂಡರೆ ಆಗ ಆಫ್ರಿಕಾ ದಾಳಿಯನ್ನು ಮೆಟ್ಟಿನಿಲ್ಲಬಲ್ಲ ಆತ್ಮವಿಶ್ವಾಸ ಮೂಡಲಿದೆ.

ಇದನ್ನೂ ಓದಿ ದಕ್ಷಿಣ ಆಫ್ರಿಕಾದ ಟೆಸ್ಟ್​ ಸರಣಿ ಭಾರತದ ಪಾಲಿನ ಕಬ್ಬಿಣದ ಕಡಲೆ; ಹೇಗಿದೆ ಇತಿಹಾಸ?

ಹಿರಿಯ ಆಟಗಾರರಾದ ಪೂಜಾರ,ರಹಾನೆ ಈ ಬಾರಿ ತಂಡದಲಿಲ್ಲ. ಆದುದರಿಂದ ಯುವ ಆಟಗಾರರಾದ ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​ ದೊಡ್ಡ ಇನಿಂಗ್ಸ್​ ಕಟ್ಟಿ ತಂಡಕ್ಕೆ ಆಸರೆಯಾಗಬೇಕು. ನಾಯಕ ರೋಹಿತ್​ ಶರ್ಮ ಜತೆ ಯಶಸ್ವಿ ಜೈಸ್ವಾಲ್​ ಇನ್ನಿಂಗ್ಸ್‌ ಆರಂಭಿಸುವುದು ಖಚಿತ. ಪೂಜಾರ ಸ್ಥಾನದಲ್ಲಿ ಶುಭಮನ್​ ಗಿಲ್​ ಆಡಬಹುದು. ಕೊಹ್ಲಿ, ರಾಹುಲ್​, ರೋಹಿತ್‌ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿದ್ದಾರೆ. ಸದ್ಯಕ್ಕೆ ಯಾರೂ ಕಳಪೆ ಫಾರ್ಮ್​ನಲ್ಲಿ ಕಾಣಿಸಿಕೊಂಡಿಲ್ಲ.

ಬೌಲಿಂಗ್​ನದ್ದೇ ಚಿಂತೆ

ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ ಅವರು ಪಾದದ ನೋವಿನಿಂದಾಗಿ ಈ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಮೊಹಮ್ಮದ್​ ಸಿರಾಜ್​ ಮತ್ತು ಜಸ್​ಪ್ರೀತ್​ ಬುಮ್ರಾ ಅವರಿಗೆ ಸಾಥ್​ ನೀಡುವ ಬೌಲರ್​ ಯಾರು ಎನ್ನುವ ಆಯ್ಕೆ ಗೊಂದಲದಲ್ಲಿದೆ ಟೀಮ್​ ಮ್ಯಾನೆಜ್​ಮೆಂಟ್​. ಶಾರ್ದೂಲ್ ಠಾಕೂರ್​ ಹೆಚ್ಚುವರಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ದೃಷ್ಟಿಯಿಂದ ಆಯ್ಕೆ ಮಾಡಿದರೂ ಕೂಡ ಮತ್ತೊಬ್ಬ ವೇಗಿಯ ಅಗತ್ಯವಿದೆ. ಏಕೆಂದರೆ ಸೆಂಚುರಿಯನ್​ನಲ್ಲಿ ಸ್ಪಿನ್​ ನಡೆಯುವುದಿಲ್ಲ. ಬೌನ್ಸಿ ಪಿಚ್​ ಇದಾಗಿದ್ದು ವೇಗಿಗಳಿಗೆ ಮಾತ್ರ ಇಲ್ಲ ಹೆಚ್ಚು ಕೆಲಸ. ಹೀಗಾಗಿ ಪ್ರಸಿದ್ಧ್​ ಕೃಷ್ಣ ಅವರಿಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ IND vs SA: ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್​ ಇತಿಹಾಸ, ಪಿಚ್​ ರಿಪೋರ್ಟ್​ ಹೇಗಿದೆ?

ಈಗಾಗಲೆ ಏಕದಿನ ವಿಶ್ವಕಪ್​ನಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್​ ಕೀಪರ್​ ಆಗಿ ಉತ್ತಮ ಯಶಸ್ಸು ಕಂಡಿರುವ ಕೆ.ಎಲ್​ ರಾಹುಲ್ ಅವರು ಟೆಸ್ಟ್​ ಸರಣಿಯಲ್ಲಿಯೂ ಕೀಪಿಂಗ್​ ನಡೆಸಲಿದ್ದಾರೆ. ಇದನ್ನು ತಂಡದ ಕೋಚ್​ ದ್ರಾವಿಡ್​ ಈಗಾಗಲೇ ಖಚಿತಪಡಿಸಿದ್ದಾರೆ. ಪಂತ್​ ಗುಣಮುಖರಾಗಿ ತಂಡಕ್ಕೆ ಮರಳಿ ಕೀಪಿಂಗ್​ ನಡೆಸುವ ತನಕ ರಾಹುಲ್​ ಅವರೇ ಭಾರತ ತಂಡದ ಪ್ರಧಾನ ಕೀಪರ್ ಆಗಿ ಕರ್ತವ್ಯ ನಿರ್ವಹಿಸಿದ್ದರೂ ಅಚ್ಚರಿಯಿಲ್ಲ.

ಹರಿಣ ಪಡೆಯೂ ಬಲಿಷ್ಠ

​ಬವುಮ ಅವರನ್ನೊಳಗೊಂಡ ಶಕ್ತಿಶಾಲಿ ಬ್ಯಾಟಿಂಗ್‌ ಪಡೆ ಆಫ್ರಿಕಾ ಬಳಿ ಇದೆ. ಯುವ ಮತ್ತು ಅನುಭವಿ ಆಟಗಾರರನ್ನು ಹೊಂದಿರುವ ಸಮರ್ಥ ತಂಡವಾಗಿ ಗೋಚರಿಸಿದೆ. ವೇಗಿಗಳಾದ ಕಗಿಸೊ ರಬಾಡ, ಲುಂಗಿ ಎನ್​ಗಿಡಿ ಮತ್ತೆ ತಂಡ ಸೇರಿದ್ದಾರೆ. ಇವರ ಜತೆ ವಿಶ್ವಕಪ್​ನಲ್ಲಿ ಮಿಂಚಿದ್ದ ಯುವ ಬೌಲರ್​ ಜೆರಾಲ್ಡ್ ಕೋಟ್ಜಿ ಕೂಡ ಅಪಾಯಕಾರಿ. ವಿದಾಯದ ಸರಣಿ ಆಡುತ್ತಿರುವ ಡೀನ್​ ಎಲ್ಗರ್​, ಐಡೆನ್​ ಮಾರ್ಕ್ರಮ್​ ಇವರೆಲ್ಲ ಬ್ಯಾಟಿಂಗ್​ ಬಲ.

Exit mobile version