ನವ ದೆಹಲಿ: ಜುಲೈ 12 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ (ind vs wi) ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಯುವ ಆಟಗಾರ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ಗೆ ತಲುಪಿದ್ದಾರೆ. ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಮೊದಲ ಬ್ಯಾಚ್ ಈಗಾಗಲೇ ಬಾರ್ಬಡೋಸ್ ತಲುಪಿದೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಗೆ ಮುಂಚಿತವಾಗಿ ತಂಡವು ೧೦ ದಿನಗಳ ಶಿಬಿರದಲ್ಲಿ ಆಟಗಾರರು ಭಾಗವಹಿಸಲಿದ್ದಾರೆ. ಇನ್ನೂ ರಜೆಯಲ್ಲಿರುವ ವಿರಾಟ್ ಕೊಹ್ಲಿ ಬೇರೊಂದು ವಿಮಾನ ಮೂಲಕ ಕೆರಿಬಿಯನ್ ದ್ವೀಪಕ್ಕೆ ತಲುಪಲಿದ್ದಾರೆ.
ವಿರಾಟ್ ಕೊಹ್ಲಿ ಲಂಡನ್ನಿಂದ ವಿಮಾನ ಹತ್ತಲಿದ್ದಾರೆ ಎಂದು ಹೇಳಲಾಗಿದೆ. ಸ್ಟಾರ್ ಬ್ಯಾಟರ್ ವೆಸ್ಟ್ ಇಂಡೀಸ್ಗೆ ಯಾವಾಗ ತಲುಪುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ನಲ್ಲಿ ತಮ್ಮ ಕುಟುಂಬದೊಂದಿಗೆ ತಮ್ಮ ರಜೆಯನ್ನು ಕಳೆಯುತ್ತಿದ್ದಾರೆ. ಅವರು ಮುಂದಿನ ವಾರ ವೆಸ್ಟ್ ಇಂಡೀಸ್ಗೆ ಇಳಿಯುವ ನಿರೀಕ್ಷೆಯಿದೆ ಎಂದು ಇಂಡಿಯನ್ ಎಕ್ಪ್ರೆಸ್ ವರದಿ ಮಾಡಿದೆ.
ಸರಣಿಗೆ ಮೊದಲು ಅಭ್ಯಾಸ ಪಂದ್ಯ
ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ, ಭಾರತವು ಜುಲೈ 5 ಮತ್ತು 6 ರಿಂದ ಕೆನ್ಸಿಂಗ್ಟನ್ ಓವಲ್ನಲ್ಲಿ ಎರಡು ದಿನಗಳ ಅಭ್ಯಾಸ ಪಂದ್ಯ ಆಡಲಿದೆ. ಬಾರ್ಬಡೋಸ್ನಲ್ಲಿ ಆಟಗಾರರು ಉಳಿದುಕೊಂಡಿದ್ದು ಜುಲೈ 1ರಿಂದ 7 ರವರೆಗೆ ಒಂದು ವಾರಗಳ ಶಿಬಿರ ಅಲ್ಲೇ ನಿಗದಿಯಾಗಿದೆ.
2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಋತುವಿನಲ್ಲಿ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡಕ್ಕೆ ವೆಸ್ಟ್ ಇಂಡೀಸ್ ಮೊದಲ ಎದುರಾಳಿ ಭಾರತ ತಂಡದ ಕಳೆದ ಆವೃತ್ತಿಯಲ್ಲಿ ಫೈನಲ್ಗೇರಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧದ ಫೈನಲ್ನಲ್ಲಿ ಸೋಲು ಅನುಭವಿಸಿತ್ತು. ಅದೇ ವೇಳೆ ವೆಸ್ಟ್ ಇಂಡೀಸ್ ತಂಡ ಕಳೆದ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೇ ಟೆಸ್ಟ್ ಸರಣಿಯನ್ನು ಆಡಿತ್ತು. ಭಾರತ ಮತ್ತು ವೆಸ್ಟ್ ಇಂಡೀಸ್ 98 ಬಾರಿ ಮುಖಾಮುಖಿಯಾಗಿದ್ದು, ಭಾರತ 22 ಬಾರಿ ಗೆದ್ದಿದ್ದರೆ, ವಿಂಡೀಸ್ 30 ಬಾರಿ ಸರಣಿ ವಶಪಡಿಸಿಕೊಂಡಿದೆ.
ಇದನ್ನೂ ಓದಿ : World Cup 2023 : ಮುಗಿಯದ ಪಾಕ್ ತಂಡದ ನಾಟಕ; ಸರಕಾರಕ್ಕೆ ಪತ್ರ ಬರೆದಿದ್ದೇವೆ ಎನ್ನುತ್ತಿದೆ ಪಿಸಿಬಿ!
ಉಭಯ ತಂಡಗಳು ಕೊನೆಯ ಬಾರಿಗೆ 2019ರಲ್ಲಿ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ಅದರದಲ್ಲಿ ಭಾರತವು ವಿಂಡೀಸ್ ಅನ್ನು 2-0 ಅಂತರದಿಂದ ವೈಟ್ವಾಷ್ ಮಾಡಿತ್ತು. ಈ ಬಾರಿಯೂ ರೋಹಿತ್ ಶರ್ಮಾ ಮತ್ತು ಬಳಗ ವಿಂಡೀಸ್ ಪಡೆಯ ವಿರುದ್ಧ ಮೇಲುಗೈ ಸಾಧಿಸುವ ಅವಕಾಶಗಳನ್ನು ಹೊಂದಿದೆ. ಆದಾಗ್ಯೂ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಇಲ್ಲದೆ ಭಾರತದ ವೇಗದ ದಾಳಿಯ ವಿಭಾಗ ಕೊಂಚ ಹಿನ್ನಡೆಯಲ್ಲಿದೆ. ವೇಗದ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ಸಿರಾಜ್ ಅವರ ಮೇಲಿದ್ದು, ಶಾರ್ದೂಲ್ ಠಾಕೂರ್, ಉನಾದ್ಕಟ್, ನವದೀಪ್ ಸೈನಿ ಮತ್ತು ಮುಖೇಶ್ ಕುಮಾರ್ ಅವರಿಗೆ ನೆರವು ನೀಡಲಿದ್ದಾರೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.