ಸೌತಾಂಪ್ಟನ್: ಭಾರತ ತಂಡದ ನಾಯಕ ರೋಹಿತ್ ಶರ್ಮ ಗುರುವಾರ ನಡೆದ Ind vs Eng T20 ಸರಣಿಯ ಮೊದಲ ಪಂದ್ಯದಲ್ಲಿ ೨೪ ರನ್ ಬಾರಿಸುವ ಮೂಲಕ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತ ತಂಡದ ಪರ ಮಾಡಿದ್ದ ಸಾಧನೆಯೊಂದನ್ನು ಹಿಂದಿಕ್ಕಿದರು.
ರೋಹಿತ್ ಶರ್ಮ ಗುರುವಾರ ನಡೆದ ಪಂದ್ಯದಲ್ಲಿ ೧೪ ಎಸೆತಗಳಲ್ಲಿ ೨೪ ರನ್ ಬಾರಿಸಿದರು. ಈ ಮೂಲಕ ಅವರು ಟೀಮ್ ಇಂಡಿಯಾದ ನಾಯಕರಾಗಿ ೧೦೦೦ ಟಿ೨೦ ರನ್‌ಗಳ ಗಡಿ ದಾಟಿದರು. ಸಹಸ್ರ ರನ್‌ಗಳ ಸಾಧನೆಯನ್ನು ಅವರು ನಾಯಕರಾಗಿ ೨೯ ಇನಿಂಗ್ಸ್‌ಗಳಲ್ಲಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ನಾಯಕರಾಗಿ ೩೦ ಇನಿಂಗ್ಸ್‌ಗಳಲ್ಲಿ ಸಾವಿರ ರನ್‌ಗಳನ್ನು ಪೇರಿಸಿದ್ದರು. ಈ ಮೂಲಕ ಮಾಜಿ ನಾಯಕ ಸೃಷ್ಟಿಸಿದ್ದ ವೇಗದಲ್ಲಿ ಸಹಸ್ರ ರನ್‌ಗಳ ದಾಖಲೆಯನ್ನು ಹಾಲಿ ನಾಯಕ ಮುರಿದರು.
ಭಾರತಕ್ಕೆ ಸರಣಿಯಲ್ಲಿ ಮುನ್ನಡೆ
ಮೊದಲ ಪಂದ್ಯದಲ್ಲಿ ಭಾರತ ತಂಡ ೫೦ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟಿ೨೦ ಸರಣಿಯಲ್ಲಿ ೧-೦ ಮುನ್ನಡೆ ಪಡೆಯಿತು. ಭಾರತ ೨೦ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೧೯೮ ರನ್ ಬಾರಿಸಿದರೆ, ಇಂಗ್ಲೆಂಡ್ ೧೯.೩ ರನ್‌ಗಳಿಗೆ ೧೪೮ ರನ್ ಮಾತ್ರ ಗಳಿಸಿ ಸೋಲೊಪ್ಪಿಕೊಂಡಿತು. ಆಲ್‌ರೌಂಡ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.