Site icon Vistara News

Rohit Sharma: ರೋಹಿತ್ ಶರ್ಮಾ​ ಕ್ಲೀನ್​ ಬೌಲ್ಡ್​; ದಾಖಲೆ ಬರೆದ ಕಗಿಸೊ ರಬಾಡ

Rohit Sharma lost his stumps to Kagiso Rabada

ಜೊಹಾನ್ಸ್​ಬರ್ಗ್​: ಟೀಮ್​ ಇಂಡಿಯಾದ ನಾಯಕ ರೋಹಿತ್​ ಶಮಾ(Rohit Sharma) ಅವರನ್ನು ಶೂನ್ಯಕ್ಕೆ ಕ್ಲೀನ್​ ಬೌಲ್ಡ್​​ ಮಾಡುವ ಮೂಲಕ ದಕ್ಷಿಣ ಆಫ್ರಿಕಾದ ಯುವ ಬೌಲರ್​ ಕಗಿಸೊ ರಬಾಡ(Kagiso Rabada) ದಾಖಲೆಯೊಂದನ್ನು ಬರೆದಿದ್ದಾರೆ. ಭಾರತ ವಿರುದ್ಧ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದ ಸಾಧನೆ ಮಾಡಿದ್ದಾರೆ.

ಮೊದಲ ಇನಿಂಗ್ಸ್​ನ 163 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಭಾರತಕ್ಕೆ ರಬಾಡ ಆರಂಭಿಕ ಆಘಾತವಿಕ್ಕಿದರು. ಹಿಟ್​ಮ್ಯಾನ್​ ರೋಹಿತ್​ ಅವರನ್ನು ಖಾತೆ ತೆರೆಯುವ ಮುನ್ನವೇ ಕ್ಲೀನ್​ ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ವಿಕೆಟ್​ ಪಡೆಯುವ ಮೂಲಕ ರಬಾಡ ಭಾರತ ವಿರುದ್ಧ ಟೆಸ್ಟ್​ನಲ್ಲಿ 50 ವಿಕೆಟ್​ ಪೂರ್ತಿಗೊಳಿಸಿದರು. ಮೊದಲ ಇನಿಂಗ್ಸ್​ನಲ್ಲಿಯೂ ರೋಹಿತ್​ ಅವರ ವಿಕೆಟ್​ ರಬಾಡ ಕಿತ್ತಿದ್ದರು.

ಮೊದಲ ಇನಿಂಗ್ಸ್​ನಲ್ಲಿ ರೋಹಿತ್​ ವಿಕೆಟ್​ ಪಡೆದ ರಬಾಡ ಅವರು ವಿಶ್ವದಾಖಲೆಯನ್ನು ಬರೆದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ರಬಾಡ ಪಾತ್ರರಾಗಿದ್ದರು. ಇದೀಗ ಮತ್ತೊಮ್ಮೆ ರೋಹಿತ್​ ವಿಕೆಟ್​ ಉಡಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ 14 ಬಾರಿ ರೋಹಿತ್​ರನ್ನು ರಬಾಡ ಔಟ್​ ಮಾಡಿದ್ದಾರೆ.

ರೋಹಿತ್​ vs ರಬಾಡ

ರೋಹಿತ್​ ಶಮಾ ಮತ್ತು ಕಗಿಸೊ ರಬಾಡ ಇದುವರೆಗೆ ಟೆಸ್ಟ್​ನಲ್ಲಿ 11 ಇನಿಂಗ್ಸ್​ನಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ 104 ರನ್​ ರೋಹಿತ್​ ಗಳಿಸಿದರೆ ನಾಲ್ಕು ಬಾರಿ ವಿಕೆಟ್​ ಒಪ್ಪಿಸಿದ್ದಾರೆ. ರಬಾಡ ಎದುರು ರೋಹಿತ್​ ಬ್ಯಾಟಿಂಗ್​ ಸರಾಸರಿ ಕೇವಲ 14.85 ಮಾತ್ರ.

ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾದಲ್ಲಿ ಕನ್ನಡದ ಕಂಪು ಸಾರಿದ ಕೆಎಲ್​ ರಾಹುಲ್​-ಪ್ರಸಿದ್ಧ್​ ಕೃಷ್ಣ

ಮುನ್ನಡೆ ಕಾಯ್ದುಕೊಂಡ ದಕ್ಷಿಣ ಆಫ್ರಿಕಾ

ಇಲ್ಲಿನ ಸೆಂಚುರಿಯನ್​ ಸೂಪರ್​ಸ್ಪೋರ್ಟ್ಸ್​ ಪಾರ್ಕ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್​ಗೆ 256 ರನ್​ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಉತ್ತಮ ಆಟವಾಡುವ ಮೂಲಕ 408 ರನ್​ ಗಳಿಸಿ 163 ರನ್​ ಮುನ್ನಡೆ ಸಾಧಿಸಿಕೊಂಡಿದೆ. ಯುವ ವೇಗಿ ಮಾರ್ಕೊ ಜಾನ್ಸೆನ್‌ ಮತ್ತು ಅನುಭವಿ ಆಟಗಾರ ಡೀನ್​ ಎಲ್ಗರ್​ ಅವರ ಅಮೋಘ ಜತೆಯಾಟ ದಕ್ಷಿಣ ಆಫ್ರಿಕಾ ಬ್ಯಾಟಿಂಗ್​ ಸರದಿಯ ಪ್ರಮುಖ ಹೈಲೆಟ್ಸ್​ ಆಗಿತ್ತು.

140 ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದ ಡೀನ್​ ಎಲ್ಗರ್​ ಮೂರನೇ ದಿನ 45 ರನ್​ ಬಾರಿಸಿದರು. ಅವರ ಒಟ್ಟು ಗಳಿಕೆ 185 ರನ್​. ಈ ಸೊಗಸಾದ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 28 ಬೌಂಡರಿ ದಾಖಲಾಯಿತು. ದ್ವಿಶತಕದತ್ತ ಮುನ್ನುಗ್ಗುತ್ತಿದ್ದ ಅವರನ್ನು ಶಾರ್ದೂಲ್​ ಠಾಕೂರ್​ ಅವರು ವೈಡ್​ ಲೈನ್​ನತ್ತ ಬೌಲಿಂಗ್​ ಎಸೆದು ಕ್ಯಾಚ್​ ನೀಡುವಂತೆ ಮಾಡಿ ವಿಕೆಟ್​ ಕಬಳಿಸಿದರು.

ಬೌಲಿಂಗ್ ಆಲ್​ರೌಂಡರ್​ ಆಗಿರುವ ಮಾರ್ಕೊ ಜಾನ್ಸೆನ್​ ಈ ಪಂದ್ಯದಲ್ಲಿ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ಅಜೇಯ ಅರ್ಧಶತಕ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾದರು. ಡೀನ್​ ಎಲ್ಗರ್​ ಜತೆ ಸೇರಿಕೊಂಡು ಉತ್ತಮ ಇನಿಂಗ್ಸ್​ ಕಟ್ಟಿ ಭಾರತೀಯ ಬೌಲರ್​ಗಳನ್ನು ಕಾಡಿದರು. ಕೊನೆಗೂ ಅವರು ಅಜೇಯರಾಗಿ ಉಳಿದರು. 11 ಬೌಂಡರಿ ಮತ್ತು 1 ಸಿಕ್ಸರ್​ ಬಾರಿಸಿ ಅಜೇಯ 84 ರನ್​ ಗಳಿಸಿದರು. ಬವುಮಾ ಗಾಯಗೊಂಡು ಬ್ಯಾಟಿಂಗ್​ ನಡೆಸದ ಕಾರಣ ಅವರಿಗೆ ಶತಕ ಬಾರಿಸುವ ಅವಕಾಶ ಕೈ ತಪ್ಪಿತು.

Exit mobile version