Site icon Vistara News

Team India | ವಿರಾಟ್‌ ಕೊಹ್ಲಿಯನ್ನೂ ಆರಂಭಿಕ ಬ್ಯಾಟಿಂಗ್‌ ಆಯ್ಕೆಯಾಗಿ ಬಳಸುತ್ತೇವೆ ಎಂದ ರೋಹಿತ್‌

IND vs PAK

ಮುಂಬಯಿ : ರೋಹಿತ್‌ ಶರ್ಮ ನೇತೃತ್ವದ ಟೀಮ್ ಇಂಡಿಯಾ (Team India) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಮುಂಬರುವ ಟಿ೨೦ ವಿಶ್ವ ಕಪ್‌ಗಾಗಿ ಸಿದ್ಧತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್‌ ಶರ್ಮ ಭಾನುವಾರ ಮುಂದಿನ ಯೋಜನೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ವೇಳೆ ಅವರು ವಿರಾಟ್‌ ಕೊಹ್ಲಿ ಅವರನ್ನು ಅಗತ್ಯ ಬಿದ್ದರೆ ಆರಂಭಿಕರಾಗಿ ಬ್ಯಾಟ್‌ ಮಾಡುವ ಆಯ್ಕೆಯಾಗಿ ಪರಿಗಣಿಸುವುದಾಗಿಯೂ ಹೇಳಿದ್ದಾರೆ.

“ಒಂದೊಳ್ಳೆ ಆಯ್ಕೆ ನಿಮ್ಮ ಮುಂದಿರುವುದು ಉತ್ತಮ ವಿಚಾರವಾಗಿರುತ್ತದೆ. ಅಂತೆಯೇ ವಿಶ್ವ ಕಪ್‌ಗೆ ತೆರಳುವ ಟೀಮ್‌ ಇಂಡಿಯಾದಲ್ಲಿ ಹೊಸತನಗಳನ್ನು ಕಾಣಬಹುದು. ಆಟಗಾರರ ಕ್ರಮಾಂಕದ ವಿಚಾರದಲ್ಲೂ ಬದಲಾವಣೆಯ ಆಯ್ಕೆಯನ್ನು ಮುಂದಿಟ್ಟುಕೊಂಡಿದ್ದೇವೆ. ಹೊಸ ಪ್ರಯೋಗ ಮಾಡಿ ಯಶಸ್ಸು ಸಾಧಿಸುವುದಾದರೆ ಅದರಲ್ಲಿ ಯಾವುದೇ ತಪ್ಪಿಲ್ಲ,” ಎಂದು ಹೇಳಿದ್ದಾರೆ.

“ನಮ್ಮ ಆಟಗಾರರ ಗುಣಮಟ್ಟದ ಬಗ್ಗೆ ನಮಗೆ ನಂಬಿಕೆ ಇದೆ. ಆದರೂ, ವಿರಾಟ್‌ ಕೊಹ್ಲಿಯನ್ನು ಮೂರನೇ ಆರಂಭಿಕ ಬ್ಯಾಟರ್‌ ಆಗಿಯೂ ಪರಿಗಣಿಸಿದ್ದೇವೆ. ಅವರೂ ಇನಿಂಗ್ಸ್‌ ಆರಂಭಿಸಬಲ್ಲರು. ಅವರು ತಮ್ಮ ಫ್ರಾಂಚೈಸಿಯ ಪರವಾಗಿ ಇನಿಂಗ್ಸ್‌ ಆರಂಭಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಿರುವಾಗ ಭಾರತ ತಂಡದ ಪರವಾಗಿಯೂ ಉತ್ತಮ ಪ್ರದರ್ಶನ ನೀಡಬಹುದು,” ಎಂದು ಅವರು ಹೇಳಿದ್ದಾರೆ.

ಉಮೇಶ್‌ ಯಾಕೆ?

ಕೊರೊನಾ ಕಾರಣಕ್ಕೆ ಮೊಹಮ್ಮದ್ ಶಮಿ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅಲಭ್ಯರಾದ ಬಳಿಕ ಉಮೇಶ್‌ ಯಾದವ್‌ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಈ ನಿರ್ಧಾರವನ್ನೂ ಅವರು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಮುಂದೆ ಹಲವಾರು ಆಯ್ಕೆಗಳು ಇದ್ದವು. ಪ್ರಸಿದ್ಧ್‌ ಕೃಷ್ಣ ಅವರು ಗಾಯಗೊಂಡಿದ್ದು ಆಡುವುದು ಅಸಾಧ್ಯ. ಮೊಹಮ್ಮದ್‌ ಸಿರಾಜ್‌ ಕೌಂಟಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಪಂದ್ಯವಷ್ಟೇ ಆಡಿರುವ ಅವರನ್ನು ತಕ್ಷಣವೇ ಭಾರತಕ್ಕೆ ವಾಪಸ್‌ ಕರೆಸಿಕೊಳ್ಳುವುದು ಬೇಡ ಎಂದು ತೀರ್ಮಾನಿಸಿದೆವು. ಆವೇಶ್ ಖಾನ್‌ ಏಷ್ಯಾ ಕಪ್‌ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಫಿಟ್‌ ಆಗಲು ಸಾಕಷ್ಟು ಸಮಯ ಬೇಕಾಗಬಹುದು. ಹೀಗಾಗಿ ಎಲ್ಲ ಮಾದರಿಯಲ್ಲಿ ದೀರ್ಘ ಕಾಲದಿಂದಲೂ ಬೌಲಿಂಗ್‌ ಮಾಡಿ ಅಭ್ಯಾಸ ಇರುವ ಉಮೇಶ್‌ ಯಾದವ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ,” ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

ಇದನ್ನೂ ಓದಿ | Virat kohli | ಶತಕ ಬಾರಿಸಿದರೂ ವಿರಾಟ್‌ ಕೊಹ್ಲಿಯ ಟೀಕೆ ನಿಲ್ಲಿಸಲಿಲ್ಲ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌!

Exit mobile version