Site icon Vistara News

Rohit Sharma: ಸಚಿನ್​ ​ ದಾಖಲೆ ಮುರಿದು 10 ಸಾವಿರ ರನ್​ ಎಲೈಟ್​ ಪಟ್ಟಿ ಸೇರಿದ ರೋಹಿತ್​ ಶರ್ಮ

Rohit Sharma looked comfortable against anything thrown at hi

ಕೊಲಂಬೊ: ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್(sachin tendulkar)​ ಅವರ ದಾಖಲೆಯೊಂದನ್ನು ಮುರಿದ್ದಾರೆ. ಜತೆಗೆ ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್​ಗಳ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು.

ಇಲ್ಲಿನ ಆರ್​.ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್​ 22 ರನ್​ ಗಳಿಸುತ್ತಿದ್ದಂತೆ ಅತಿ ಕಡಿಮೆ ಪಂದ್ಯಗಳಲ್ಲಿ 10 ಸಾವಿರ ರನ್​​ ಪೂರೈಸಿದ ಭಾರತದ ಮತ್ತು ವಿಶ್ವದ ಎರಡನೇ ಆಟಗಾರ ಎನಿಸಿಕೊಂಡರು. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ಸಚಿನ್​ ಅವರನ್ನು ಹಿಂದಿಕ್ಕಿದರು. ವಿರಾಟ್​ ಕೊಹ್ಲಿ(virat kohli) ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 205 ಪಂದ್ಯಗಳಲ್ಲಿ ಮಾಡಿದ್ದಾರೆ. ರೋಹಿತ್​ 241 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು. ಇದಲ್ಲದೆ 10 ಸಾವಿರ ರನ್​ಗಳ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡ ಆರನೇ ಭಾರತೀಯ ಮತ್ತು ಒಟ್ಟಾರೆ 15ನೇ ಆಟಗಾರನೆಂಬ ದಾಖಲೆ ಬರೆದರು. ರೋಹಿತ್​ ಈ ಪಂದ್ಯದಲ್ಲಿ 48 ಎಸೆತ ಎದುರಿಸಿ 53 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು.

ಅತಿ ವೇಗವಾಗಿ 10 ಸಾವಿರ ರನ್​ ಪೂರೈಸಿದ 5 ಆಟಗಾರರು

ವಿರಾಟ್​ ಕೊಹ್ಲಿ

ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ ಈಗಾಗಲೇ ಹಲವು ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದು ಮುನ್ನಗುತ್ತಿದ್ದಾರೆ. ಅವರು 205 ಪಂದ್ಯಗಳಲ್ಲಿ ಹತ್ತು ಸಾವಿರ ರನ್​ಗಳ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ಪಾಕ್​ ವಿರುದ್ಧದ ಪಂದ್ಯದಲ್ಲಿ ಅತಿ ವೇಗವಾಗಿ 13 ಸಾವಿರ ರನ್​ ಪೂರೈಸಿದ ದಾಖಲೆ ಬರೆದಿದ್ದರು.

ರೋಹಿತ್​ ಶರ್ಮ

ರೋಹಿತ್​ ಶರ್ಮ ಅವರಿಗೆ 10 ಸಾವಿರ ರನ್​ ಪೂರೈಸುವ ಅವಕಾಶ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲೇ ಲಭಿಸಿತ್ತು. ಆದರೆ ಅವರು ಈ ಸರಣಿಯಲ್ಲಿ ಆಡದೆ ವಿಶ್ರಾಂತಿ ಪಡೆದಿದ್ದರು. ಬಳಿಕ ಆರಂಭಿಕ ಏಷ್ಯಾಕಪ್​ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ತೋರ್ಪಡಿಸುವಲ್ಲಿ ಎಡವಿದ್ದರು. ಕಳೆದ ಪಾಕ್​ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು ಮಾಡಲಿದ್ದಾರೆ ಎನ್ನುವಷ್ಟರಲ್ಲಿ ಸಿಕ್ಸರ್​ ಬಾರಿಸುವ ಯತ್ನದಲ್ಲಿ ಔಟಾಗಿದ್ದರು. 22 ರನ್​ ಅಂತರದಲ್ಲಿ ಈ ಅವಕಾಶ ಕಳೆದುಕೊಂಡರು. ಆದರೆ ಲಂಕಾ ವಿರುದ್ಧದ ಪಂದ್ಯದಲ್ಲಿ ಈ ಗುರಿಯನ್ನು ಕೊನೆಗೂ ತಲುಪಿದರು. ಸದ್ಯ ಅವರು ಎರಡನೇ ಸ್ಥಾನ ಪಡೆದಿದ್ದಾರೆ.

ಸಚಿನ್​ ತೆಂಡೂಲ್ಕರ್​

ಸಚಿನ್​ ತೆಂಡೂಲ್ಕರ್​ ಅವರು 259ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಇದುವರೆಗೆ ಅವರು ಎರಡನೇ ಸ್ಥಾನದಲ್ಲಿದ್ದರು. ಆದರೆ ರೋಹಿತ್​ ಅವರನ್ನು ಹಿಂದಿಕ್ಕಿದ ಕಾರಣ ಸಚಿನ್​ ಸದ್ಯ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಸಚಿನ್​ ಒಟ್ಟಾರೆಯಾಗಿ 463 ಏಕದಿನ ಪಂದ್ಯಗಳನ್ನು ಆಡಿ 18426 ರನ್​ ಬಾರಿಸಿದ್ದಾರೆ. ಇದರಲ್ಲಿ 49 ಶತಕ ಮತ್ತು 96 ಅರ್ಧಶತಕ, ಒಂದು ದ್ವಿಶತಕ ಒಳಗೊಂಡಿದೆ.

ಇದನ್ನೂ ಓದಿ Rohit Sharma: ಸಚಿನ್​ ದಾಖಲೆ ಮುರಿದ ಹಿಟ್​ಮ್ಯಾನ್​ ರೋಹಿತ್​

ಸೌರವ್​ ಗಂಗೂಲಿ

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ 263 ಪಂದ್ಯಗಳಲ್ಲಿ 10 ಸಾವಿರ ರನ್​ಗಳ ಗಡಿ ದಾಟಿದ್ದರು. ಆಲ್​ರೌಂಡರ್​ ಆಗಿದ್ದ ಗಂಗೂಲಿ ವಿಶ್ವಕಪ್​ ಗೆಲ್ಲದಿದ್ದರೂ ಭಾರತ ಕ್ರಿಕೆಟ್​ ತಂಡವನ್ನು ಉತ್ತುಂಗಕ್ಕೇರಿಸಿದ ಹಿರಿಮೆ ಅವರದ್ದಾಗಿದೆ. 2003ರ ವಿಶ್ವಕಪ್​ನಲ್ಲಿ ಅವರ ನಾಯಕತ್ವದಲ್ಲಿ ಫೈನಲ್​ ಪ್ರವೇಶಿಸಿತ್ತು. ಆದರೆ ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಗಂಗೂಲಿ ಭಾರತ ಪರ 311 ಏಕದಿನ ಪಂದ್ಯ ಆಡಿ 11363 ರನ್​ ಬಾರಿಸಿದ್ದಾರೆ. 22 ಶತಕ ಮತ್ತು 72 ಅರ್ಧಶತಕ ಸಿಡಿಸಿದ್ದಾರೆ.

ರಿಕಿ ಪಾಂಟಿಂಗ್​

ಆಸ್ಟ್ರೇಲಿಯಾದ 2 ಏಕದಿನ ವಿಶ್ವಕಪ್​ ವಿಜೇತ ಮಾಜಿ ನಾಯಕ ರಿಕಿ ಪಾಂಟಿಂಗ್​ ಅವರು 266 ಪಂದ್ಯಗಳಲ್ಲಿ 10 ಸಾವಿರ ರನ್​ ಪೂರ್ತಿಗೊಳಿಸಿದ್ದರು. ಪಾಂಟಿಂಗ್ 375 ಏಕದಿನ ಪಂದ್ಯಗಳನ್ನು ಆಡಿ 13704​ ರನ್​ ಬಾರಿಸಿದ್ದಾರೆ. 30 ಶತಕ ಮತ್ತು 82 ಅರ್ಧಶತಕ ಬಾರಿಸಿದ್ದಾರೆ. ಒಟ್ಟಾರೆ ಮೂರು ಏಕದಿನ ವಿಶ್ವಕಪ್​ ಗೆದ್ದ ಹಿರಿಮೆಯೂ ಅವರ ಪಾಲಿಗಿದೆ. ನಾಯಕನಾಗಿ 2 ಆಟಗಾರನಾಗಿ ಒಂದು ವಿಶ್ವಕಪ್​ ಗೆದ್ದಿದ್ದಾರೆ.

Exit mobile version