Site icon Vistara News

Team India : ಒಳಗೇನು ನಡೆಯುತ್ತಿದೆ ಎಂಬುದು ಗೊತ್ತಿಲ್ಲ, ಹೊರಗೆ ನಿಂತು ನೋಡಿದ್ದೆಲ್ಲವೂ ಸತ್ಯವಲ್ಲ

team India

ನಾಟಿಂಗ್‌ಹ್ಯಾಮ್‌: ನಮ್ಮ ತಂಡದೊಳಗೆ (Team India) ಭವಿಷ್ಯದ ಯೋಜನೆ ಯಾವ ರೀತಿ ನಡೆಯುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಹೊರಗಿನಿಂದ ಕೊಡುವ ಹೇಳಿಕೆಗಳಿಗೆ ಪ್ರಾಮುಖ್ಯತೆ ಇಲ್ಲ ಎಂದು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಹೇಳಿಕೆ ನೀಡಿದ್ದು, ವಿರಾಟ್‌ ಕೊಹ್ಲಿಯನ್ನು ತಂಡದಿಂದ ಹೊರಗಿಡುವ ಕಪಿಲ್‌ ದೇವ್‌ ಅವರ ಸಲಹೆ ತಿರಸ್ಕರಿಸಿದ್ದಾರೆ.

ಮಾಜಿ ನಾಯಕ ವಿರಾಟ್‌ ಕೊಹ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ. ಅಂತೆಯೇ ಹಿರಿಯ ಆಟಗಾರರಿಗೆ ಕೊಹ್ಲಿ ಕುರಿತು ಹೇಳಿಕೆ ಕೊಡುವುದಕ್ಕೆ ಅವಕಾಶಗಳೂ ಒದಗಿ ಬಂದಿವೆ. ಈ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಮಾಜಿ ನಾಯಕ ಕಪಿಲ್‌ ದೇವ್‌, ಮುಂಬರುವ ಟಿ೨೦ ವಿಶ್ವ ಕಪ್‌ ತಂಡದಲ್ಲಿ ವಿರಾಟ್‌ ಕೊಹ್ಲಿಗೆ ಅವಕಾಶ ನೀಡಬಾರದು. ದೀಪಕ್‌ ಹೂಡಾ ಅವರಂಥ ಆಟಗಾರರು ಸರದಿಗಾಗಿ ಕಾಯುತ್ತಿರುವಾಗ ಕೊಹ್ಲಿಯನ್ನು ತಂಡದಲ್ಲಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ನೀಡಿದ್ದರು. ಇದನ್ನುದ್ದೇಶಿಸಿ ಮಾತನಾಡಿದ ರೋಹಿತ್‌ ಶರ್ಮ ಹೊರಗಿನ ಹೇಳಿಕೆಗಳಿಗೆ ಪ್ರಾಮುಖ್ಯತೆ ಇಲ್ಲ ಎಂದಿದ್ದಾರೆ.

“ಕಪಿಲ್‌ ದೇವ್‌ ಅವರು ಹೊರಗಿನಿಂದ ಪಂದ್ಯವನ್ನು ನೋಡುತ್ತಿದ್ದಾರೆ. ಒಳಗೆ ಏನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ. ನಮಗೆ ನಮ್ಮದೇ ಆದ ಕೆಲವು ಯೋಜನೆಗಳಿರುತ್ತವೆ. ನಾವು ನಮ್ಮ ತಂಡವನ್ನು ಕಟ್ಟಲು ಪ್ರಯತ್ನಿಸುತ್ತಿರುತ್ತೇವೆ. ಅದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತೇವೆ. ನಾವು ಯುವ ಆಟಗಾರರಿಗೆ ಅವಕಾಶಗಳನ್ನು ನೀಡುವ ಮೂಲಕ ಅವರನ್ನೂ ಬೆಳೆಸುತ್ತಿದ್ದೇವೆ. ಹೀಗಾಗಿ ಹೊರಗೆ ನಿಂತು ನೀಡುವ ಹೇಳಿಕೆಗಳಿಗೆ ಬೆಲೆಯಿಲ್ಲ. ಒಳಗಿನ ಬೆಳವಣಿಗೆಗಳೇ ನಮಗೆ ಅತ್ಯಗತ್ಯ,ʼʼ ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಎಲ್ಲರೂ ಎದುರಿಸುವ ಸಮಸ್ಯೆ

“”ಆಟಗಾರನ ಫಾರ್ಮ್‌ ಬಗ್ಗೆ ಮಾತನಾಡುವುದಾದರೆ, ಎಲ್ಲರೂ ಯಾವುದೊ ಒಂದು ಹಂತದಲ್ಲಿ ಫಾರ್ಮ್‌ ಕಳೆದುಕೊಳ್ಳುತ್ತಾರೆ ಹಾಗೂ ಮತ್ತೆ ಪಡೆದುಕೊಳ್ಳುತ್ತಾರೆ. ಆದರೆ, ಆಟಗಾರನ ಗುಣಮಟ್ಟ ಯಾವ ಕಾರಣಕ್ಕೂ ಕುಸಿಯುವುದಿಲ್ಲ. ಅದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ,ʼʼ ಎಂದು ಹೇಳಿದರು.

“ಹಲವು ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಆಟಗಾರನೊಬ್ಬ ಒಂದೆರಡು ಸೀರಿಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ತಕ್ಷಣ ಆತ ಕೆಟ್ಟ ಆಟಗಾರ ಎನಿಸಿಕೊಳ್ಳುವುದಿಲ್ಲ. ಅವರ ಹಿಂದಿನ ಪ್ರದರ್ಶನವನ್ನು ಬಿಟ್ಟು ವಿಮರ್ಶೆ ನಡೆಸಬಾದರು. ತಂಡವೊಂದರ ಭಾಗವಾಗಿ ಆಟಗಾರರ ಅಗತ್ಯವನ್ನು ಅರಿತುಕೊಳ್ಳಬೇಕಾಗುತ್ತದೆ. ಮಾಜಿ ಆಟಗಾರರಿಗೆ ಮಾತನಾಡುವ ಎಲ್ಲ ಹಕ್ಕುಗಳೂ ಇವೆ. ಆದರೆ, ಅತಿಯಾಗಿ ವಿಮರ್ಶೆ ಮಾಡಿ ಪರಿಣಾಮ ಉಂಟಾಗುವಂತೆ ಮಾಡಬಾರದು,ʼʼ ಎಂದು ಹೇಳಿದರು.

ಏನಂದಿದ್ದರು ಕಪಿಲ್‌?

ವಿರಾಟ್‌ ಕೊಹ್ಲಿ ಫಾರ್ಮ್‌ ಕಳೆದುಕೊಂಡಿರುವ ಕಾರಣ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಕಪಿಲ್‌ ಹೇಳಿದ್ದರು. ಅದಕ್ಕೆ ಆರ್‌. ಅಶ್ವಿನ್‌ ಅವರ ಉದಾಹರಣೆ ಕೊಟ್ಟಿದ್ದರು. “”ವಿಶ್ವದ ನಂಬರ್‌ ೨ ಟೆಸ್ಟ್‌ ಬೌಲರ್‌ ಅನ್ನು ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರಗಿಡಬೇಕಾಗಿದರೆ, ವಿರಾಟ್‌ ಕೊಹ್ಲಿಯನ್ನು ಯಾಕೆ ಬೆಂಚು ಕಾಯಿಸಬಾರದು,ʼʼ ಎಂದು ಕಪಿಲ್‌ ಹೇಳಿದ್ದರು.

ಯಾರವರು ತಜ್ಞರು?

“ತಂಡದ ಕುರಿತು ಹೇಳಿಕೆ ಕೊಡುತ್ತಿರುವ ಅವರೆಲ್ಲರೂ ಯಾವ ರೀತಿಯಲ್ಲಿ ತಜ್ಞರು. ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಅವರನ್ನು ಯಾಕೆ ಕ್ರಿಕೆಟ್‌ ತಜ್ಞರು ಎಂದು ಕರೆಯಲಾಗುತ್ತದೆ,ʼʼ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

ಇದನ್ನೂ ಓದಿ: INDvsENG T20 : ಸೂರ್ಯಕುಮಾರ್‌ ಮಿಂಚಿದರೂ ಭಾರತಕ್ಕೆ ಲಭಿಸಲಿಲ್ಲ ಗೆಲುವು, 2-1ರಲ್ಲಿ ಸರಣಿ ಜಯ

Exit mobile version