ಪುಣೆ: ಭಾರತ ತಂಡ ಗುರುವಾರ ನಡೆಯುವ ವಿಶ್ವಕಪ್ ಪಂದ್ಯದಲ್ಲಿ ಬಾಂಗ್ಲಾದೇಶ(India vs Bangladesh) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯವನ್ನಾಡಲು ಉಭಯ ತಂಡಗಳು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ(Maharashtra Cricket Association Stadium, Pune) ಭರ್ಜರಿ ತಯಾರಿ ನಡೆಸುತ್ತಿದೆ. ಅಚ್ಚರಿ ಎಂದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಕೂಡ ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ.
ರೋಹಿತ್ ಶರ್ಮ ಅವರು ಬೌಲಿಂಗ್ ಅಭ್ಯಾಸ ನಡೆಸಿರುವ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇಲ್ಲಿ ರೋಹಿತ್ ಅವರು ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿ ಸೇರಿ ಇನ್ನೂ ಕೆಲ ಆಟಗಾರರಿಗೆ ಬೌಲಿಂಗ್ ಮಾಡಿದ್ದಾರೆ. ಅಲ್ಲದೆ ರವೀಂದ್ರ ಜಡೇಜಾ ಅವರನ್ನು ಔಟ್ ಮಾಡಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ನಡೆಸುವ ಸಾಧ್ಯತೆಯೂ ಅಧಿಕವಾಗಿದೆ.
ಐಪಿಎಲ್ನಲ್ಲಿ ಹ್ಯಾಟ್ರಿಕ್
ಆಫ್ ಸ್ಪಿನ್ನರ್ ಆಗಿರುವ ರೋಹಿತ್ ಶರ್ಮ ಅವರು ಈಗಾಗಲೇ ಐಪಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 2009ರ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮ ಅವರು ಡೆಕ್ಕನ್ ಚಾರ್ಜಸ್ ತಂಡದ ಪರ ಈ ಸಾಧನೆ ಮಾಡಿದ್ದರು. ಅಂದು ಮುಂಬೈ ಎದುರಿನ ಪಂದ್ಯದಲ್ಲಿ ರೋಹಿತ್ ಅವರು ಅಭಿಷೇಕ್ ನಾಯರ್, ಹರ್ಭಜನ್ ಸಿಂಗ್ ಮತ್ತು ಜೆಪಿ ಡುಮಿನಿ ಅವರ ವಿಕೆಟ್ ಕಿತ್ತ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ರೋಹಿತ್ ಆರು ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೆ ಇದೇ ಆವೃತ್ತಿಯಲ್ಕಿ ಡೆಕ್ಕನ್ ಚಾರ್ಜಸ್ ಚಾಂಪಿಯನ್ ಪಟ್ಟ ಕೂಡ ಅಲಂಕರಿಸಿತ್ತು. ಇದೀಗ ವಿಶ್ವಕಪ್ನಲ್ಲಿಯೂ ರೋಹಿತ್ ಹ್ಯಾಟ್ರಿಕ್ ವಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಬೌಲಿಂಗ್ ಸಾಧನೆ
ರೋಹಿತ್ ಶರ್ಮ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯ ಆರಂಭಿಕ ದಿನಗಳಲ್ಲಿ ಆಲ್ರೌಂಡರ್ ಪಾತ್ರ ನಿರ್ವಹಿಸುತ್ತಿದ್ದರು. ಸ್ಪಿನ್ ಬೌಲಿಂಗ್ ನಡೆಸಿ ವಿಕೆಟ್ ಕೂಡ ಕೀಳುತ್ತಿದ್ದರು. ಏಕದಿನ ಕ್ರಿಕೆಟ್ನಲ್ಲಿ 8 ವಿಕೆಟ್, ಟೆಸ್ಟ್ನಲ್ಲಿ 2 ಮತ್ತು ಟಿ20ಯಲ್ಲಿ ಒಂದು ಹಾಗೂ ಐಪಿಎಲ್ನಲ್ಲಿ 15 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 27ಕ್ಕೆ 2 ವಿಕೆಟ್ ಪಡೆದದ್ದು ಉತ್ತಮ ಸಾಧನೆಯಾಗಿದೆ.
ರೋಹಿತ್ ಶರ್ಮಾ ಹಾಲಿ ವಿಶ್ವ ಕಪ್ನಲ್ಲಿ ಅತ್ಯುತ್ತಮವಾಗಿ ಫಾರ್ಮ್ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅವರು ಅಫಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಅದೇ ರೀತಿ ಪಾಕಿಸ್ತಾನ ತಂಡದ ವಿರುದ್ಧ ಅಮೋಘ ಅರ್ಧ ಶತಕ ಬಾರಿಸಿದ್ದರು. ಈ ವೇಳೆ ಸಿಕ್ಸರ್ಗಳ ಒಟ್ಟು ಗಳಿಕೆ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿದಿದ್ದರು. ಅವರು ಬ್ಯಾಟಿಂಗ್ ವೈಖರಿಯಿಂದಾಗಿಯೇ ಭಾರತ ತಂಡ ಸಾಕಷ್ಟು ವಿಶ್ವಾಸ ಗಳಿಸಿದೆ. ಮುಂದಿನ ಪಂದ್ಯಗಳಲ್ಲಿ ಭರ್ಜರಿ ಯಶಸ್ಸು ಸಾಧಿಸುವ ಎಲ್ಲ ಲಕ್ಷಣವನ್ನು ತೋರುತ್ತಿದೆ.
ಇದನ್ನೂ ಓದಿ IND vs BAN: ಬಾಂಗ್ಲಾ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ!
ಶಮಿಗೆ ಅವಕಾಶ
ಶಾರ್ದೂಲ್ ಠಾಕೂರ್ ಅವರು ಬಾಂಗ್ಲಾ ವಿರುದ್ಧದ ಪಂದ್ಯದಿಂದ ಹೊರಗುಳಿಯುವುದು ಬಹುತೇಖ ಖಚಿತ. ಏಕೆಂದರೆ ಅವರು ಆಡಿದ 2 ಪಂದ್ಯಗಳಲ್ಲಿಯೂ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ತೋರಿಲ್ಲ. ಅವರಿಗೆ ಬ್ಯಾಟಿಂಗ್ ನಡೆಸುವ ಅವಕಾಶವೂ ಲಭಿಸಿಲ್ಲ. ಕೇವಲ ಒಂದೆರಡು ಓವರ್ಗೆ ಮಾತ್ರ ಸೀಮಿತರಾಗಿದ್ದಾರೆ. ಹೀಗಾಗಿ 10 ಓವರ್ ಎಸೆಯಬಲ್ಲ ಅನುಭವಿ ಶಮಿಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಶಮಿ ಅವರು ಹೊಸ ಚೆಂಡಿನಲ್ಲಿ ಘಾತಕ ಸ್ಫೆಲ್ ನಡೆಸಿ ವಿಕೆಟ್ ಕೀಳುವ ಸಾಮರ್ಥ್ಯ ಹೊಂದಿದ್ದಾರೆ. ಅವರನ್ನು ಈ ಹಿಂದಿನ ಎರಡು ಪಂದ್ಯಗಳಿಂದ ಕೈ ಬಿಟ್ಟಿದ್ದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅವರಿಗೆ ಅವಕಾಶ ಸಿಗುವುದು ಖಚಿತ ಎನ್ನಲಾಗಿದೆ.