ಕೊಲಂಬೊ: ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಮೊದಲ ಏಕದಿನ(Sri Lanka vs India 1st ODI) ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದರೂ ಕೂಡ ಇದನ್ನು ಸದುಪಯೋಗಪಡಿಸುವಲ್ಲಿ ಸಹ ಆಟಗಾರರು ಎಡವಿದ ಬಗ್ಗೆ ನಾಯಕ ರೋಹಿತ್ ಶರ್ಮ(Rohit Sharma) ಬೇಸರ ವ್ಯಕ್ತಪಡಿಸಿದ್ದಾರೆ. ನಿಜಕ್ಕೂ ಈ ಪಂದ್ಯದ ಬಳಿಕ ನಿರಾಸೆಗೊಂಡಿದ್ದೇನೆ ಎಂದು ಹೇಳಿದ್ದಾರೆ. ಪಂದ್ಯ ಟೈನಲ್ಲಿ ಅಂತ್ಯ ಕಂಡಿತ್ತು.
ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್, 230 ರನ್ಗಳನ್ನು ಸುಲಭವಾಗಿ ಚೇಸಿಂಗ್ ಮಾಡಬಹುದಾಗಿತ್ತು. ಆದರೆ ಕೊನೆಯಲ್ಲಿ ನಮ್ಮ ಆಟ ನಿರಾಶಾದಾಯಕವಾಗಿತ್ತು. 14 ಎಸೆತಗಳಲ್ಲಿ ಗೆಲುವಿಗೆ ಕೇವಲ 1 ರನ್ ಬೇಕಿದ್ದರೂ ಕೂಡ ಇದನ್ನು ಗಳಿಸಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ. ಈ ಪಂದ್ಯ ನಮ್ಮ ಪಾಲಿಗೆ ನಿರಾಸೆ ತಂದಿದೆ. ಎಂದು ಹೇಳುವ ಮೂಲಕ ರೋಹಿತ್ ಸಹ ಆಟಗಾರರ ಕಳಪೆ ಮತ್ತು ನಿರ್ಲಕ್ಷ್ಯದ ಬ್ಯಾಟಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಿ ಟೈ ನಲ್ಲಿ ಅಂತ್ಯಗೊಂಡಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಭಾರತ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 47.5 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಗೆಲುವಿಗೆ ಒಂದು ರನ್ ಬೇಕಿದ್ದಾಗ ಶಿವಂ ದುಬೆ ಮತ್ತು ಅರ್ಶ್ದೀಪ್ ಸಿಂಗ್ ಸತತವಾಗಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದು ವಿಕೆಟ್ ಕೈಚೆಲ್ಲಿದರು. ಸೋಲುವ ಭೀತಿಯಲ್ಲಿದ್ದ ಲಂಕಾ ಅಸಾಮಾನ್ಯ ಪ್ರದರ್ಶನ ತೋರಿ ಪಂದ್ಯವನ್ನು ಟೈ ಗೊಳಿಸುವ ಮೂಲಕ ನಿಟ್ಟುಸಿರುಬಿಟ್ಟಿತು.
ಇದನ್ನೂ ಓದಿ Rohit Sharma: ಲಂಕಾ ವಿರುದ್ಧ ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮ
ಭಾರತ ಪರ ಚೇಸಿಂಗ್ನಲ್ಲಿ ನಾಯಕ ರೋಹಿತ್ ಶರ್ಮ 47 ಎಸೆತಗಳಿಂದ 58 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು. ಉಳಿದಂತೆ ಕೆ.ಎಲ್ ರಾಹುಲ್ 31, ಅಕ್ಷರ್ ಪಟೇಲ್ 33 ರನ್ ಬಾರಿಸಿದರು.
ಮಾರ್ಗನ್ ದಾಖಲೆ ಮುರಿದ ರೋಹಿತ್
47 ಎಸೆತಗಳಿಂದ 58 ರನ್ ಬಾರಿಸಿದ ರೋಹಿತ್ ತಮ್ಮ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಈ ಮೂರು ಸಿಕ್ಸರ್ ಬಾರಿಸಿದ ವೇಳೆ ರೋಹಿತ್ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್(233 ಸಿಕ್ಸರ್) ಹೆಸರಿನಲ್ಲಿತ್ತು. ಇದೀಗ ರೋಹಿತ್(234 ಸಿಕ್ಸರ್) ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 211 ಸಿಕ್ಸರ್ ಬಾರಿಸಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರನೇ ಸ್ಥಾನದಲ್ಲಿದ್ದಾರೆ.
ನಾಯಕನಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
ರೋಹಿತ್ ಶರ್ಮ-234 ಸಿಕ್ಸರ್
ಇಯಾನ್ ಮಾರ್ಗನ್-233 ಸಿಕ್ಸರ್
ಮಹೇಂದ್ರ ಸಿಂಗ್ ಧೋನಿ-211 ಸಿಕ್ಸರ್
ರಿಕಿ ಪಾಂಟಿಂಗ್-171 ಸಿಕ್ಸರ್
ಬ್ರೆಂಡನ್ ಮೆಕಲಮ್-170 ಸಿಕ್ಸರ್