ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ(South Africa vs India, 2nd Test) ಇಂದು ಆರಂಭಗೊಳ್ಳಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದರೆ ನಾಯಕ ರೋಹಿತ್ ಶರ್ಮ(Rohit Sharma) ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ(MS Dhoni) ದಾಖಲೆಯೊಂದನ್ನು ಸರಿಗಟ್ಟಲಿದ್ದಾರೆ. ಇದಕ್ಕೆ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.
ಹೌದು, ಭಾರತ ತಂಡ ಇದುವರಗೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ 8 ಟೆಸ್ಟ್ ಸರಣಿಗಳಲ್ಲಿ 7ರಲ್ಲಿ ಸೋಲು ಕಂಡಿದೆ. ಒಂದೇ ಒಂದು ಸರಣಿ ಗೆಲುವು ಕೂಡ ಇದುವರೆಗೆ ಸಾಧ್ಯವಾಗಿಲ್ಲ. ಈ ಬಾರಿಯಾದರೂ ಇದು ಸಾಧ್ಯವಾದಿತೆ ಎಂದು ಎಲ್ಲರಿ ನಿರೀಕ್ಷೆ ಮಾಡಿದ್ದರು. ಆದರೆ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುವ ಮೂಲಕ ಈ ನಿರೀಕ್ಷೆ ಹುಸಿಯಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ಭಾರತದ ಸಾಧನೆ ಎಂದರೆ 2011-12ರಲ್ಲಿ ಏಕೈಕ ಬಾರಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದಲ್ಲಿ ಆಡಿದ ಸರಣಿಯಲ್ಲಿ ಸಮಬಲದ ಗೌರವ ಕಂಡಿತ್ತು. ಇದೀಗ ಆ ಸಾಧನೆಯನ್ನು ಸರಿಗಟ್ಟುವ ಅವಕಾಶ ರೋಹಿತ್ಗೆ ಇದೆ. ಪಂದ್ಯ ಗೆದ್ದು ಸರಣಿಯನ್ನು ಡ್ರಾ ಮಾಡಿದರೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋಲದ ಭಾರತದ 2ನೇ ನಾಯಕ ಎನಿಸಲಿದ್ದಾರೆ.
ಬೌಲರ್ಗಳ ಮೇಲೆ ವಿಶ್ವಾಸವಿದೆ
ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಪ್ರಸ್ತುತ ತಂಡದ ಬೌಲಿಂಗ್ ಅನನುಭವಿಯಾಗಿದೆ. ಆದರೆ, ನಮ್ಮ ಬೌಲಿಂಗ್ ದ್ವಿತೀಯ ಪಂದ್ಯದಲ್ಲಿ ಯಶಸ್ಸು ಕಾಣಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
“ಕೆಲವೊಮ್ಮೆ ನಮ್ಮ ಬೌಲಿಂಗ್ ವಿಭಾಗ ನೋಡುವಾಗ ಅನನುಭವದಿಂದ ಕೂಡಿದೆ ಎಂದು ನನಗೆ ಅನಿಸುತ್ತದೆ. ಕ್ರಿಕೆಟ್ನ ಆರಂಭಿಕ ದಿನಗಳಲ್ಲಿ ಎಲ್ಲ ಆಟಗಾರನೂ ಕೂಡ ಏರಿಳಿತ ಕಾಣುತ್ತಾನೆ. ಯುವ ಬೌಲರ್ಗಳ ಮೇಲೆ ತಂಡ ನಂಬಿಕೆ ಇಟ್ಟರೆ ಅವರಿಂದ ಉತ್ತಮ ಪ್ರದರ್ಶನ ಹೊರಬರುತ್ತದೆ. ಪ್ರಸಿದ್ಧ್ ಕೃಷ್ಣ ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ ಸಫಲವಾಗಲು ಬೇಕಾದ ಉತ್ತಮ ಕೌಶಲ್ಯ ಹೊಂದಿದ್ದಾರೆ. ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ ಎನ್ನುವ ಕಾರಣಕ್ಕೆ ಅವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ” ಎಂದು ಹೇಳುವ ಮೂಲಕ ರೋಹಿತ್ ಪ್ರಸಿದ್ಧ್ ಬೆಂಬಲಕ್ಕೆ ನಿಂತಿದ್ದಾರೆ.
ಟೆಸ್ಟ್ ಸರಣಿಗೆ ಮಹತ್ವ
ಭಾರತ ತಂಡ ಈ ವರ್ಷ ಏಕದಿನ ಮತ್ತು ಟಿ20 ಸರಣಿಗಿಂತ ಅಧಿಕ ಟೆಸ್ಟ್ ಸರಣಿಯನ್ನೇ ಆಡಲಿದೆ. ಇದೇ ವರ್ಷ ಟಿ20 ವಿಶ್ವಕಪ್ ಇದ್ದರೂ ಕೂಡ ಭಾರತ ಟೆಸ್ಟ್ ಕ್ರಿಕೆಟ್ಗೆ ಹೆಚ್ಚು ಒತ್ತು ನೀಡಿರುವುದು ಅಚ್ಚರಿ ತಂದಿದೆ. ಸದ್ಯಕ್ಕೆ ನಿಗದಿಯಾದ ವೇಳಾಪಟ್ಟಿ ಪ್ರಕಾರ ಭಾರತ ಈ ವರ್ಷ 15 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ಪಂದ್ಯವೂ ಸೇರಿ.
ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ತವರಿನಲ್ಲೇ ಮತ್ತೆ ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ 3 ಟೆಸ್ಟ್ ಆಡಲಿದೆ. ವರ್ಷಾಂತ್ಯಕ್ಕೆ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೆಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪೈಕಿ ಸರಣಿಯ ಕೊನೇ ಟೆಸ್ಟ್ 2025ರ ಆರಂಭದಲ್ಲಿ ನಡೆಯಲಿದೆ.