ಬೆಂಗಳೂರು: ನೆದರ್ಲೆಂಡ್ಸ್(India vs Netherlands) ವಿರುದ್ಧ ಸಾಗುತ್ತಿರುವ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಸಿಕ್ಸರ್ ಬಾರಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಅವರು ಉತ್ತಮ ಆರಂಭ ಒದಗಿಸಿದರು. ಉಭಯ ಆಟಗಾರರು ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅರ್ಧಶತಕ ಬಾರಿಸಿ ವಿಕೆಟ್ ಕೈಚೆಲ್ಲಿದರು. ಮೊದಲ ವಿಕೆಟ್ಗೆ ಇವರಿಂದ ಭರ್ತಿ 100 ರನ್ ಒಟ್ಟುಗೂಡಿತು. ಇದು ಕೇವಲ 11 ಓವರ್ನಲ್ಲಿ ದಾಖಲಾಯಿತು.
ವಿಲಿಯರ್ಸ್ ದಾಖಲೆ ಪತನ
ರೋಹಿತ್ ಶರ್ಮ 54 ಎಸೆತಗಳನ್ನು ಎದುರಿಸಿ 61 ರನ್ ಬಾರಿಸಿದರು. ಅವರ ಈ ಅರ್ಧಶತಕದ ಇನಿಂಗ್ಸ್ನಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿ ಸಿಡಿಯಿತು. 2 ಸಿಕ್ಸರ್ ಬಾರಿಸಿದ ವೇಳೆ ಡಿ ವಿಲಿಯರ್ಸ್ ಅವರ ದಾಖಲೆಯೊಂದು ಪತನಗೊಂಡಿತು. ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ದಾಖಲೆ ಇದುವರೆಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆಟಗಾರ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿತ್ತು. ವಿಲಿಯರ್ಸ್ ಅವರು 2015ರಲ್ಲಿ 58 ಸಿಕ್ಸರ್ ಬಾರಿಸಿದ್ದರು. ಇದೀಗ ರೋಹಿತ್ ಅವರು ಸದ್ಯ 2023 ಸಾಲಿನಲ್ಲಿ 59 ಸಿಕ್ಸರ್ ಬಾರಿಸಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಆಡಲಿರುವ ರೋಹಿತ್ ತಮ್ಮ ಸಿಕ್ಸರ್ಗಳ ಸಂಖ್ಯೆಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ IND vs NED Live: ಭಾರತದ 2ನೇ ವಿಕೆಟ್ ಪತನ; ರೋಹಿತ್ ಔಟ್
ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರು
ರೋಹಿತ್ ಶರ್ಮ-59* ಸಿಕ್ಸರ್
ಎಬಿ ಡಿ ವಿಲಿಯರ್ಸ್-58 ಸಿಕ್ಸರ್
ಕ್ರಿಸ್ ಗೇಲ್-56 ಸಿಕ್ಸರ್
ಶಾಹೀದ್ ಅಫ್ರಿದಿ- 48 ಸಿಕ್ಸರ್
18 ಸಾವಿರ ರನ್ ಪೂರ್ತಿ
ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 18,000 ಅಂತಾರಾಷ್ಟ್ರೀಯ ರನ್ ಪೂರೈಸಿದ ದಾಖಲೆ ಬರೆದಿದ್ದರು. ರೋಹಿತ್ ಅವರು 477ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಐದನೇ ಭಾರತೀಯ ಆಟಗಾರ ಎನಿಸಿದ್ದಾರೆ. ರೋಹಿತ್‌ಗಿಂತ ಮೊದಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.
Milestone Unlocked 🔓
— BCCI (@BCCI) October 29, 2023
1⃣8⃣,0⃣0⃣0⃣ international runs & counting for #TeamIndia Captain Rohit Sharma 👏👏#CWC23 | #MenInBlue | #INDvENG pic.twitter.com/zV5pvstagT
ಉತ್ತಮ ಪ್ರದರ್ಶನ
ರೋಹಿತ್ ಅವರ ನಾಯಕತ್ವದಲ್ಲಿ ಭಾರತ ತಂಡ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದೆ. ಆಡಿದ ಎಲ್ಲ 8 ಪಂದ್ಯಗಳನ್ನು ಗೆದ್ದು ಅಜೇಯ ಓಟ ಕಾಯ್ದುಕೊಂಡಿದೆ. ನೆದರ್ಲೆಂಡ್ಸ್ ವಿರುದ್ಧವೂ ಗೆದ್ದರೆ ಎಲ್ಲ ಪಂದ್ಯವನ್ನು ಗೆದ್ದ ದಾಖಲೆ ಬರೆಯಲಿದೆ.