Site icon Vistara News

Rohit Sharma: ಟಾಸ್​ ವೇಳೆಯೇ ಹೊಸ ಇತಿಹಾಸ ಬರೆಯಲಿದ್ದಾರೆ ಹಿಟ್​ಮ್ಯಾನ್​ ರೋಹಿತ್; ಏನದು?

Rohit Sharma hits out at the nets

ಇಂದೋರ್​: ಅಫಘಾನಿಸ್ತಾನ ವಿರುದ್ಧ ಇಂದು ನಡೆಯುವ ದ್ವಿತೀಯ ಟಿ20(India vs Afghanistan, 2nd T20I) ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅವರು ವಿಶೇಷ ದಾಖಲೆ ಬರೆಯಲಿದ್ದಾರೆ. ರೋಹಿತ್​ ಟಾಸ್​ಗೆ ಮೈದಾನಕ್ಕಿಳಿಯುತ್ತಿದಂತೆ ಈ ದಾಖಲೆ ನಿರ್ಮಾಣವಾಗಲಿದೆ.

ಹೌದು, ರೋಹಿತ್​ ಶರ್ಮ ಅವರಿಗೆ ಇಂದಿನ ಪಂದ್ಯ 150ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ರೋಹಿತ್ ಇದುವರೆಗೆ 149 ಟಿ20 ಪಂದ್ಯಗಳನ್ನು ಆಡಿ 3853 ರನ್​ಗಳನ್ನು ಬಾರಿಸಿದ್ದಾರೆ. ಅಲ್ಲದೆ 20 ವಿಕೆಟ್​ ಕಿತ್ತ ಸಾಧನೆಯೂ ಅವರದ್ದಾಗಿದೆ. ರೋಹಿತ್​ ಬಳಿಕ ಅತ್ಯಧಿಕ ಟಿ20 ಪಂದ್ಯ ಆಡಿದ ಮತೋರ್ವ ಆಟಗಾರನೆಂದರೆ ಐರ್ಲೆಂಡ್​ನ ಪೌಲ್ ಸ್ಟೀರ್ಲಿಂಗ್. ಅವರು ಒಟ್ಟು 134 ಟಿ20 ಪಂದ್ಯಗಳನ್ನಾಡಿ 3,438 ರನ್​ ಹಾಗೂ 20 ವಿಕೆಟ್ ಪಡೆದಿದ್ದಾರೆ.

ಕಳೆದ ಪಂದ್ಯದಲ್ಲಿ ರೋಹಿತ್​ ಅವರು ಶುಭಮನ್​ ಗಿಲ್​ ಅವರ ಬೇಜವಾಬ್ದಾರಿಯಿಂದ ಶೂನ್ಯಕ್ಕೆ ರನೌಟ್​ ಆಗಿದ್ದರು. ಆ ಪಂದ್ಯ ರೋಹಿತ್​ 14 ತಿಂಗಳ ಬಳಿಕ ಆಡಿದ ಪಂದ್ಯವಾಗಿತ್ತು. ಉತ್ತಮ ಆಟ ಪ್ರದರ್ಶಿಸುವ ಯೋಜನೆಯಲ್ಲಿದ್ದ ಅವರಿಗೆ ಗಿಲ್​ ಅಡ್ಡಗಾಲು ಹಾಕಿದ್ದರು. ಔಟಾದ ಸಿಟ್ಟಿನಲ್ಲಿ ರೋಹಿತ್​ ಮೈದಾನದಲ್ಲೇ ತಮ್ಮ ಸಿಟ್ಟನ್ನು ಹೊರಹಾಕಿದ್ದರು. ಇದೀಗ ದ್ವಿತೀಯ ಪಂದ್ಯದಲ್ಲಿ ಸಿಡಿಯುವ ಸಾಧ್ಯತೆ ಇದೆ.

ಇದನ್ನೂ ಓದಿ IND vs AFG: ಇಂದು ನಡೆಯುವ ಭಾರತ-ಆಫ್ಘನ್ 2ನೇ​ ಟಿ20 ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಕೊಹ್ಲಿ ದಾಖಲೆ ಮಲೆ ಕಣ್ಣು


ರೋಹಿತ್​ ಶರ್ಮ ಇಂದಿನ ಪಂದ್ಯದಲ್ಲಿ 44 ರನ್​ ಗಳಿಸಿದರೆ ವಿರಾಟ್​ ಕೊಹ್ಲಿಯ ದಾಖಲೆಯೊಂದನ್ನು ಮುರಿಯಲಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ಹಿರಿಮೆಗೆ ರೋಹಿತ್​ ಪಾತ್ರರಾಗಲಿದ್ದಾರೆ. ಈ ಮೂಲಕ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಕೊಹ್ಲಿ ಟಿ20ಯಲ್ಲಿ ಭಾರತ ತಂಡವನ್ನು 50 ಪಂದ್ಯಗಳಲ್ಲಿ ಮುನ್ನಡೆಸಿ 46 ಇನಿಂಗ್ಸ್ ಮೂಲಕ 13 ಅರ್ಧಶತಕದ ನೆರವಿನಿಂದ ಒಟ್ಟು 1,570 ರನ್ ಬಾರಿಸಿದ್ದಾರೆ. ಈ ದಾಖಲೆಯ ಮುರಿಯಲು ರೋಹಿತ್​ಗೆ 44 ರನ್​ಗಳ ಅವಶ್ಯವಿದೆ. ರೋಹಿತ್​ ನಾಯಕನಾಗಿ 51 ಇನಿಂಗ್ಸ್ ಆಡಿ 1527 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 10 ಅರ್ಧಶತಕ ದಾಖಲಾಗಿದೆ.

ಸಿಕ್ಸರ್​ ದಾಖಲೆ


ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 582 ಸಿಕ್ಸರ್​ ಬಾರಿಸಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್​ ಶರ್ಮ, ಅಫಘಾನಿಸ್ತಾನ ವಿರುದ್ಧದ ಇನ್ನುಳಿದ 2 ಟಿ20 ಪಂದ್ಯಗಳಲ್ಲಿ ಒಟ್ಟು 18 ಸಿಕ್ಸರ್​ ಬಾರಿಸಿದರೆ 600 ಸಿಕ್ಸರ್​ಗಳನ್ನು ಪೂರ್ತಿಗೊಳಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ 486 ಇನಿಂಗ್ಸ್​ ಆಡಿರುವ ರೋಹಿತ್ ಇದುವರೆಗೆ ಟೆಸ್ಟ್​ನಲ್ಲಿ 77, ಏಕದಿನದಲ್ಲಿ 323, ಟಿ20ಯಲ್ಲಿ 182 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. 600 ಸಿಕ್ಸರ್​ಗಳಿಗೆ ಇನ್ನು 18 ಸಿಕ್ಸರ್​ಗಳ ಅಗತ್ಯವಿದೆ.

Exit mobile version