ನ್ಯೂಯಾರ್ಕ್: ಐರ್ಲೆಂಡ್ ವಿರುದ್ಧದ ಮೊದಲ ಲೀಗ್ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಇದೀಗ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ನಾಳೆ(ಭಾನುವಾರ) ನಡೆಯುವ ಪಂದ್ಯಲ್ಲಿ ಪಾಕಿಸ್ತಾನದ(IND vs PAK) ಸವಾಲು ಎದುರಿಸಲಿದೆ. ಈ ಪಂದ್ಯವನ್ನು ಹೈವೋಲ್ಟೇಜ್ ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ(Team India) ದೊಡ್ಡ ಆತಂಕವೊಂದು ಎದುರಾಗಿದೆ.
ಹೌದು, ಐಲೆಂರ್ಡ್ ವಿರುದ್ಧದ ಪಂದ್ಯದಲ್ಲಿ ಭುಜಕ್ಕೆ ಚೆಂಡಿನೇಟು ತಿಂದು ಗಾಯಗೊಂಡು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿದ್ದ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ(Injury Scare For Rohit Sharma) ಅವರು ನಾಳಿನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇದು ತಂಡಕ್ಕೆ ಚಿಂತೆಗೀಡು ಮಾಡಿದೆ.
ಈ ಮೊದಲೇ ಗಾಯಗೊಂಡಿದ್ದ ರೋಹಿತ್(Rohit Sharma) ಇದೀಗ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ಪಾಕ್ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ರೋಹಿತ್ ಬೆರಳಿಗೆ ತಾಗಿದೆ. ಮೂಲಗಳ ಪ್ರಕಾರ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ನಸೌ ಮೈದಾನದ ಪಿಚ್ ಕೂಡ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಿದೆ. ಚೆಂಡಿನ ಚಲನೆಯನ್ನು ತಿಳಿಯುವಲ್ಲಿ ಬ್ಯಾಟರ್ಗಳು ಪರದಾಡುತ್ತಿದ್ದಾರೆ. ಹೆಚ್ಚಾಗಿ ಚೆಂಡು ಬ್ಯಾಟರ್ಗಳ ದೇಹಕ್ಕೆ ತಾಗುತ್ತಿದೆ. ಹೀಗಾಗಿ ಬ್ಯಾಟರ್ಗಳು ಎಚ್ಚರಿಕೆಯಿಂದ ಆಡುವ ಅಗತ್ಯವಿದೆ. ಒಂದೊಮ್ಮೆ ರೋಹಿತ್ ಆಡದೇ ಹೋದರೆ, ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಬಹುದು. ಕೊಹ್ಲಿ ಮತ್ತು ಜೈಸ್ವಾಲ್ ಭಾರತದ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಪಿಚ್ ಬಗ್ಗೆ ಅಸಮಾಧಾನ
ಐರ್ಲೆಂಡ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ್ದ ರೋಹಿತ್ ಶರ್ಮ, ನಾಸೌ ಮೈದಾನದ ಡ್ರಾಪ್ ಇನ್ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಪಿಚ್ ಕ್ರಿಕೆಟ್ ಆಡಲು ಅಷ್ಟು ಯೋಗ್ಯವಾಗಿಲ್ಲ. ಬಿರುಕುಗಳು ಅಧಿಕವಾಗಿದೆ. ಬೌಲರ್ಗಳಿಗೆ ಅನುಕೂಲಕರವಾಗಿದ್ದರೂ ಕೂಡ ಬ್ಯಾಟರ್ಗಳಿಗೆ ಇದು ಸೂಕ್ತವಾಗಿಲ್ಲ. ಚೆಂಡಿನ ಚಲನೆಯನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ನಾನು ಗಾಯಗೊಂಡೆ. ಈ ಪಿಚ್ ವರ್ತನೆ ಅರ್ಥೈಸುವುದು ಅಷ್ಟು ಸುಲಭವಾಗಿಲ್ಲ ಎಂದಿದ್ದರು.
ಇದನ್ನೂ ಓದಿ IND vs PAK: ಪಾಕ್ ವಿರುದ್ಧ ಈ ಬಾರಿಯೂ ಮರುಕಳಿಸಲಿ ಕೊಹ್ಲಿಯ ಬ್ಯಾಟಿಂಗ್ ಗತವೈಭವ
‘ಇದು ಹೊಸ ಪಿಚ್ ಆಗಿದ್ದು, ಉತ್ತಮವಾದ ಹುಲ್ಲಿನ ಹೊದಿಕೆ ಇದೆ. ಆದರೆ, ಅದರೊಂದಿಗೆ ದೊಡ್ಡ ಬಿರುಕುಗಳೂ ಇವೆ. ಇದರಿಂದ ಚೆಂಡಿನ ಬೌನ್ಸ್ ಕುಗ್ಗುತ್ತದೆ. ಈ ರೀತಿಯ ಪಿಚ್‌ಗಳಲ್ಲಿ ಅಭ್ಯಾಸ ಪಂದ್ಯಗಳನ್ನು ನಡೆಸಿ ಇದನ್ನು ಸೆಟ್ ಮಾಡಬೇಕು. ಬಳಿಕ, ದೊಡ್ಡ ಪಂದ್ಯಗಳನ್ನು ಆಯೋಜಿಸಬೇಕು. ಎಲ್ಲ 4 ಪಿಚ್‌ಗಳು ಇದೇ ರೀತಿ ಆಗಿದ್ದು, ಟಿ-20 ಟೂರ್ನಿಗೆ ಯೋಗ್ಯವಲ್ಲ’ ಎಂದು ಕ್ರಿಕೆಟ್ ವಿಶ್ಲೇಷಕರೊಬ್ಬರು ಹೇಳಿದ್ದರು. ಆಸ್ಟ್ರೇಲಿಯಾದಿಂದ ತರಿಸಿದ ಡ್ರಾಪ್ ಇನ್ ಪಿಚ್ ಇದಾಗಿದೆ.
ಪಾಕಿಸ್ತಾನ ಮತ್ತು ಭಾರತ ತಂಡದ ಪರ ಘಾತಕ ಬೌಲರ್ಗಳು ಇರುವ ಕಾರಣ ಉಭಯ ತಂಡಗಳ ಬ್ಯಾಟರ್ಗಳಿಗೆ ಇಲ್ಲಿ ಆಡುವುದೇ ಸವಾಲಾಗಿ ಪರಿಣಮಿಸಿದೆ. ಬ್ಯಾಟರ್ಗಳು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅದರಲ್ಲೂ ಸ್ಟಾರ್ ಬ್ಯಾಟರ್ಗಳು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದರೆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಹೀಗಾಗಿ ಎಲ್ಲ ತಂಡದ ಬ್ಯಾಟರ್ಗಳು ಕೂಡ ಜಾಗರೂಕರಾಗಿ ಆಡಬೇಕಿದೆ.