Site icon Vistara News

Rohit Sharma : ಪತ್ನಿಗೆ ಸಿಹಿ ಮುತ್ತು ನೀಡಿ ರಾಜ್​ಕೋಟ್​ಗೆ ಹೊರಟ ರೋಹಿತ್; ಇಲ್ಲಿದೆ ಕ್ಯೂಟ್​ ವಿಡಿಯೊ

Rohit Sharma

ನವ ದೆಹಲಿ : ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ (ind vs aus) ನಡುವಿನ ಏಕ ದಿನ ಸರಣಿಯ ಮೂರನೇ ಪಂದ್ಯ ಬುಧವಾರ ಗುಜರಾತ್​ನ ರಾಜ್​ಕೋಟ್​ನಲ್ಲಿ ನಡೆಯಲಿದೆ. ಭಾರತ ತಂಡ (Team India) ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಆದಾಗ್ಯೂ ಮೂರನೇ ಪಂದ್ಯ ಭಾರತ ತಂಡದ ಪಾಲಿಗೆ ಅಮೂಲ್ಯವೇ ಸರಿ. ಯಾಕೆಂದರೆ ಏಕ ದಿನ ವಿಶ್ವ ಕಪ್​ ಆರಂಭಕ್ಕೆ ಇನ್ನು ಒಂದು ವಾರವಷ್ಟೇ ಬಾಕಿ ಇರುವಾಗ ಆಡುವ ಪ್ರತಿಯೊಂದು ಪಂದ್ಯಗಳು ಆಟಗಾರರಿಗೆ ಡ್ರೆಸ್ ರಿಹರ್ಸಲ್​ ಇದ್ದಂತೆ. ಆದರೆ, ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡದ ಸ್ಟಾರ್ ಆಟಗಾರರು ಇರಲಿಲ್ಲ. ನಾಯಕ ರೋಹಿತ್ ಶರ್ಮಾ (Rohit Sharma), ಮಧ್ಯಮ ಕ್ರಮಾಂಕದಲ್ಲಿ ವಿರಾಟ್​ಕೊಹ್ಲಿ, ಬೌಲರ್​ ಜಸ್ಪ್ರಿತ್​ ಬುಮ್ರಾ ಆಡಿಲ್ಲ. ಅವರೆಲ್ಲರೂ ಮೂರನೆ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಮೊದಲೆರಡು ಪಂದ್ಯಗಳಲ್ಲಿ ಆಡದೇ ಇರುವ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಮಂಗಳವಾರ ರಾಜ್​ಕೋಟ್​ಗೆ ಹೋಗಿ ತಂಡವನ್ನು ಸೇರಿಕೊಂಡಿದ್ದಾರೆ. ಅಂತೆಯೇ ರೋಹಿತ್​ ಶರ್ಮಾ ಮುಂಬಯಿ ಏರ್​ಪೋರ್ಟ್​ ಮೂಲಕ ಗುಜರಾತ್​ನ ನಗರಕ್ಕೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ಅವರು ಪತ್ನಿಯನ್ನು ಬೀಳ್ಕೊಡುವಾಗ ಸಿಹಿ ಮುತ್ತು ನೀಡಿದ್ದಾರೆ. ಈ ಕ್ಯೂಟ್​ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗಿದೆ.

ಕಾರಿನಿಂದ ಇಳಿದ ತಕ್ಷಣ ರೋಹಿತ್ ಶರ್ಮಾ ಒಳಗೆ ಬಗ್ಗಿ ಪತ್ನಿಗೆ ರಿತಿಕಾ ಅವರಿಗೆ ಮುತ್ತು ನೀಡುತ್ತಾರೆ. ಬಳಿಕ ಅವರು ತಮ್ಮ ಬ್ಯಾಗ್ ಎತ್ತಿಕೊಂಡು ಹೊರಡುತ್ತಾರೆ. ಅವರು ಮುಂದೆ ಸಾಗುತ್ತಿದ್ದಂತೆ ರಿತಿಕಾ ಅವರು ಟಾಟಾ ಮಾಡುತ್ತಾರೆ. ಈ ವಿಡಿಯೊವನ್ನು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅದಕ್ಕೆ ಹಿಟ್​ಮ್ಯಾನ್​ ಗೆಟ್​ ಹಗ್​ ಫ್ರಮ್​ ವೈಫಿ ಎಂದು ಬರೆಯಲಾಗಿದೆ.

ಗಿಲ್​-ಶಾರ್ದೂಲ್​ಗೆ ರೆಸ್ಟ್​

ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ಪಡೆದಿದ್ದ ಕಾಯಂ ನಾಯಕ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್​ದೀಪ್​ ಯಾದವ್​ ಮತ್ತು ಜಸ್​ಪ್ರೀತ್​ ಬುಮ್ರಾ ಅವರು ಈ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ವಿಶ್ವಕಪ್​ ನಿಟ್ಟಿನಲ್ಲಿ ಪ್ರಚಂಡ ಫಾರ್ಮ್​ನಲ್ಲಿರುವ ಯುವ ಆಟಗಾರ ಶುಭಮನ್​ ಗಿಲ್​ ಮತ್ತು ಶಾರ್ದೂಲ್​ ಠಾಕೂರ್​ಗೆ ಈ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ.

ಇದನ್ನೂ ಓದಿ : Cauvery water dispute: ಟ್ವೀಟ್​ ಮೂಲಕ ಕಾವೇರಿ ಕರುನಾಡ ಆಸ್ತಿ ಎಂದರೇ ಕ್ರಿಕೆಟಿಗ ರಾಹುಲ್​?

ಶುಭಮನ್​ ಗಿಲ್​ ಅವರು ಈ ಪಂದ್ಯದಿಂದ ವಿಶ್ರಾಂತಿ ಪಡೆದ ಕಾರಣ ರೋಹಿತ್​ ಶರ್ಮ ಜತೆ ಇಶಾನ್​ ಕಿಶನ್​ ಆರಂಭಿಜನಾಗಿ ಕಣಕ್ಕಿಳಿಯಬಹುದು. ಕಳೆದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಅಯ್ಯರ್​ ಈ ಸ್ಥಾನವನ್ನು ಕೊಹ್ಲಿಗೆ ಬಿಟ್ಟುಕೊಟ್ಟು ನಾಲ್ಕನೇ ಕ್ರಮಾಂಕದಲ್ಲಿ ಇಳಿಯಲಿದ್ದಾರೆ. ರಾಹುಲ್​ 5ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಬಹುದು.

ಜಡೇಜಾಗೂ ವಿಶ್ರಾಂತಿ ಸಾಧ್ಯತೆ

ಭಾರತ ಇದುವರೆಗೆ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 7 ಸರಣಿಯನ್ನು ಗೆದ್ದ ಸಾಧನೆ ಮಾಡಿ(ಈ ಸರಣಿಯೂ ಒಳಗೊಂಡು) ಆದರೆ ಒಮ್ಮೆಯೂ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿಲ್ಲ. ಈ ಬಾರಿ ಉತ್ತಮ ಅವಕಾಶ ಭಾರತಕ್ಕಿದೆ. ಇದಕ್ಕೆ ಅಂತಿಮ ಪಂದ್ಯವನ್ನೂ ಗೆಲ್ಲಬೇಕಿದೆ. ಏಷ್ಯಾಕಪ್​ ಫೈನಲ್​ನಲ್ಲಿ ಘಾತಕ ಬೌಲಿಂಗ್​ ದಾಳಿ ನಡೆಸಿ ಲಂಕಾ ದಹನ ಮಾಡಿದ ಮೊಹಮ್ಮದ್​ ಸಿರಾಜ್ ಈ ಪಂದ್ಯದಲ್ಲಿ ಕಣಕಿಳಿಯುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಕ್ಕೆ ಅವರು ವಿಶ್ರಾಂತಿ ಪಡೆದಿದ್ದರು. ಸತತ ಪಂದ್ಯ ಆಡುತ್ತಿರುವ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡುವ ಸಲುವಾಗಿ ಆಡುವ ಬಳಗದಿಂದ ಹೊರಗಿಡುವ ಸಾಧ್ಯತೆಯೂ ಇದೆ. ಅವರ ಸ್ಥಾನದಲ್ಲಿ ಕುಲ್​ ದೀಪ್​ ಆಡಬಹುದು. ಅಕ್ಷರ್​ ಪಟೇಲ್​ ಗಾಯಗೊಂಡ ಕಾರಣ ಅಶ್ವಿನ್​ಗೆ ಈ ಪಂದ್ಯದಲ್ಲಿಯೂ ಅವಕಾಶ ನೀಡಿ ವಿಶ್ವಕಪ್​ಗೆ ಬದಲಿ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆಯೂ ಇದೆ.

Exit mobile version