ಪಲ್ಲೆಕೆಲೆ: ಹಲವು ಪಂದ್ಯಗಳ ಬಳಿಕ ಹಿಟ್ ಮ್ಯಾನ್ ಖ್ಯಾತಿಯ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ನೇಪಾಳ ವಿರುದ್ಧದ ಏಷ್ಯಾಕಪ್(Asia Cup 2023) ಪಂದ್ಯದಲ್ಲಿ ಅರ್ಧಶಕ ಬಾರಿಸಿ ತಮ್ಮ ಬ್ಯಾಟಿಂಗ್ ಪಾರ್ಮ್ ಕಂಡುಕೊಂಡರು. ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ 10 ವಿಕೆಟ್ಗಳ ಗೆಲುವು ಸಾಧಿಸಿ ಸೂಪರ್-4 ಹಂತಕ್ಕೇರಿತು. ಇದೇ ವೇಳೆ ಅವರು ಏಷ್ಯಾಕಪ್ನಲ್ಲಿ ಹಲವು ದಾಖಲೆಗಳನ್ನು ಬರೆದರು.
ಸಚಿನ್ ದಾಖಲೆ ಸರಿಗಟ್ಟಿದ ರೋಹಿತ್
ಏಷ್ಯಾಕಪ್ ಟೂರ್ನಿಯಲ್ಲಿ(ಟಿ20 ಮತ್ತು ಏಕದಿನ) ಅತಿ ಹೆಚ್ಚು ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಉಭಯ ಆಟಗಾರರು ಸದ್ಯ 7 ಅರ್ಧಶತಕ ಬಾರಿಸಿದ್ದಾರೆ. ನೇಪಾಳ ವಿರುದ್ಧ ರೋಹಿತ್ ಅವರು 59 ಎಸೆತಗಳಿಂದ ಅಜೇಯ 74 ರನ್ ಬಾರಿಸಿದ್ದರು. ಇದರಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಒಳಗೊಂಡಿತ್ತು.
ಸಿಕ್ಸರ್ ದಾಖಲೆ
ಏಕದಿನ ಮಾದರಿಯ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಈಗ ಅಗ್ರಸ್ಥಾನದಲ್ಲಿದ್ದಾರೆ. 36 ವರ್ಷದ ರೋಹಿತ್ ನೇಪಾಳ ವಿರುದ್ಧ 5 ಸಿಕ್ಸರ್ ಬಾರಿಸಿ ಈ ಸಾಧನೆ ಮಾಡಿದರು. ಇದುವರೆಗೂ ಈ ದಾಖಲೆ ಮಾಜಿ ಆಟಗಾರ ಸುರೇಶ್ ರೈನಾ ಹೆಸರಿನಲ್ಲಿತ್ತು. ರೈನಾ 18 ಗರಿಷ್ಠ ಸಿಕ್ಸರ್ಗಳನ್ನು ಬಾರಿಸಿದ್ದರು. ಆದರೆ ರೋಹಿತ್ ಈಗ 22 ಸಿಕ್ಸರ್ ಬಾರಿಸಿ ರೈನಾ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಸಕ್ರೀಯವಾಗಿ ಏಷ್ಯಾಕಪ್ ಆಡುತ್ತಿರುವವರ ಪೈಕಿ ಸಿಕ್ಸರ್ ದಾಖಲೆಯಲ್ಲಿ ರೋಹಿತ್ ಅಗ್ರಸ್ಥಾನ ಪಡೆದಿದ್ದಾರೆ. ಒಟ್ಟಾರೆ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಸಾಧಕರಲ್ಲಿ ರೋಹಿತ್ಗೆ 2ನೇ ಸ್ಥಾನ. ಮೊದಲ ಸ್ಥಾನ ಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ ಹೆಸರಿನಲ್ಲಿದೆ. ಅವರು 23 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಮುಂದಿನ ಪಂದ್ಯದಲ್ಲಿ 2 ಸಿಕ್ಸರ್ ಬಾರಿಸಿದರೆ. ಈ ದಾಖಲೆಯನ್ನು ಮುರಿಯಲಿದ್ದಾರೆ.
ಸಚಿನ್ ದಾಖಲೆ ಮುರಿಯುವ ಅವಕಾಶ
ರೋಹಿತ್ ಶರ್ಮ ಅವರು ಸಚಿನ್ ಬಳಿಕ ಏಷ್ಯಾಕಪ್ನಲ್ಲಿ ಹೆಚ್ಚು ರನ್ಗಳಿಸಿದ ಭಾರತೀಯ ಆಟಗಾರರ ಪೈಕಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರೋಹಿತ್ ಅವರು ಈ ಆವೃತ್ತಿಯಲ್ಲಿ 141 ರನ್ ಗಳಿಸಿದರೆ ಸಚಿನ್ ಅವರ ದಾಖಲೆ ಪತನಗೊಳ್ಳಲಿದೆ. ರೋಹಿತ್ ಇದುವರೆಗೆ 24 ಪಂದ್ಯಗಳಿಂದ 48.82 ಸರಾಸರಿಯಲ್ಲಿ 830 ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ಈಗಾಗಲೇ ಭಾರತ ತಂಡಕ್ಕೆ ಏಷ್ಯಾಕಪ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಈ ಬಾರಿ ಗೆದ್ದರೆ ಎರಡನೇ ಪ್ರಶಸ್ತಿಯಾಗಲಿದೆ. 2018ರಲ್ಲಿ ಯುಎಇಯಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್ಗಳಿಂದ ಸೋಲಿಸಿ ಪ್ರಶಸ್ತಿ ಎತ್ತಿ ಹಿಡಿದಿತ್ತು.
ಇದನ್ನೂ ಓದಿ Ravindra Jadeja: ಏಷ್ಯಾಕಪ್ನಲ್ಲಿ ನೂತನ ದಾಖಲೆ ಬರೆದ ರವೀಂದ್ರ ಜಡೇಜಾ
ಸಚಿನ್ ಅವರ ಮತ್ತೊಂದು ದಾಖಲೆ ಮೇಲೆ ಕಣ್ಣು
ರೋಹಿತ್ ಅವರು 78 ರನ್ ಬಾರಿಸಿದರೆ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ಸಚಿನ್ ತೆಂಡೂಲ್ಕರ್(Sachin Tendulkar) ಅವರನ್ನು ಹಿಂದಿಕ್ಕಲಿದ್ದಾರೆ. ವಿರಾಟ್ ಕೊಹ್ಲಿ(virat kohli) ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 213 ಪಂದ್ಯಗಳಲ್ಲಿ ಮಾಡಿದ್ದಾರೆ. ರೋಹಿತ್ 10 ಸಾವಿರ ರನ್ಗಳ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರೆ ಈ ಸಾಧನೆ ಮಾಡಿದ ಆರನೇ ಭಾರತೀಯ ಮತ್ತು ಒಟ್ಟಾರೆ 15ನೇ ಆಟಗಾರನೆಂಬ ದಾಖಲೆ ಬರೆಯಲ್ಲಿದ್ದಾರೆ.
ಸದ್ಯ 246 ಏಕದಿನ ಪಂದ್ಯಗಳನ್ನು ಆಡಿದ್ದು 9922* ರನ್ ಬಾರಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 3 ದ್ವಿಶತಕ ಒಳಗೊಂಡಿದೆ. ಏಕದಿನದಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ರೋಹಿತ್ ಪಾಲಿಗಿದೆ. 264 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.