ದುಬೈ: ಐಸಿಸಿ ನೂತನ ಏಕದಿನ(ICC Odi Ranking) ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಆಟಗಾರರು ಉತ್ತಮ ಪ್ರಗತಿ ಸಾಧಿಸಿದ್ದಾರೆ. ನಾಯಕ ರೋಹಿತ್ ಶರ್ಮ(719 ರೇಟಿಂಗ್ ಅಂಕ) ಅವರು 5 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನಕ್ಕೇರಿದ್ದಾರೆ. ನಂ.1 ಸ್ಥಾನಕ್ಕಾಗಿ ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭಮನ್ ಗಿಲ್ ಮತ್ತು ಪಾಕ್ ನಾಯಕ ಬಾಬರ್ ಅಜಂ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯಕ್ಕೆ ಬಾಬರ್ ಅಗ್ರಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಟೂರ್ನಿಯ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕಾರಣ ರೋಹಿತ್ ಅವರು ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದ್ದಾರೆ. ರೋಹಿತ್ ಆಫ್ಘನ್ ವಿರುದ್ಧ 131 ಮತ್ತು ಪಾಕಿಸ್ತಾನ ವಿರುದ್ಧ 86 ರನ್ ಬಾರಿಸಿದ್ದರು. ಒಂದೊಮ್ಮೆ ಆಸೀಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗದಿದ್ದರೆ ಇನ್ನೂ ಒಂದು ಸ್ಥಾನಗಳ ಏರಿಕೆ ಕಾಣಬಹುದಿತ್ತು. ಸದ್ಯ ಮುಂದಿನ ಪಂದ್ಯಗಳಲ್ಲಿ ಇದೇ ಬ್ಯಾಟಿಂಗ್ ನಿರ್ವಹಣೆ ತೋರಿದರೆ ಅಗ್ರಸ್ಥಾನಕ್ಕೇರುವ ಅವಕಾಶವೂ ಅವರ ಮುಂದಿದೆ.
ಬಾಬರ್-ಗಿಲ್ ಮಧ್ಯೆ ಫೈಟ್
ಅಗ್ರಸ್ಥಾನ ಹೊಂದಿರುವ ಪಾಕ್ ನಾಯಕ ಬಾಬರ್ ಅಜಂ ಅವರು ಸದ್ಯ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿಲ್ಲ. ಅವರ ರೇಟಿಂಗ್ ಅಂಕದಲ್ಲಿ ಕುಸಿತ ಕಾಣುತ್ತಿದೆ. ಸದ್ಯ ಅವರು 836 ರೇಟಿಂಗ್ ಅಂಕ ಹೊಂದಿದ್ದಾರೆ. ಇವರನ್ನು ಹಿಂದಿಕ್ಕುವ ಅವಕಾಶ ಶುಭಮನ್ ಗಿಲ್ಗೆ ಇದೆ. ಗಿಲ್ 818 ರೇಟಿಂಗ್ ಅಂಕ ಹೊಂದಿದ್ದಾರೆ. ಡೆಂಗ್ಯೂ ಜ್ವರದಿಂದ ಅವರು ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇಲ್ಲವಾದರೆ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ನಂ.1 ಸ್ಥಾನವನ್ನು ವಶಪಡಿಸಿಕೊಳ್ಳಬಹುದಿತ್ತು. ಗುರುವಾರ ನಡೆಯುವ ಪಂದ್ಯದಲ್ಲಿ ಗಿಲ್ ಶತಕ ಬಾರಿಸಿದ್ದ ಆದರೆ ಬಾಬರ್ ದ್ವಿತೀಯ ಸ್ಥಾನಕ್ಕೆ ಕುಸಿಯುವುದು ಖಚಿತ.
ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್ ಶತತ ಎರಡು ಶತಕ ಬಾರಿಸಿರುವ ಕ್ವಿಂಟನ್ ಡಿ ಕಾಕ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಮತ್ತೋರ್ವ ದಕ್ಷಿಣ ಆಫ್ರಿಕಾ ಬ್ಯಾಟರ್ ರಸ್ಸಿ ವಾನ್ ಡರ್ ಡುಸ್ಸೆನ್ 4ನೇ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಡೇವಿಡ್ ಮಲಾನ್ ತಲಾ 711 ರೇಟಿಂಗ್ ಅಂಕದೊಂದಿಗೆ ಜಂಟಿ 8ನೇ ಸ್ಥಾನ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ IND vs BAN: ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿ ಭಾರತ; ಬಾಂಗ್ಲಾ ಎದುರಾಳಿ
ಸಿರಾಜ್ಗೆ ಮೂರನೇ ಸ್ಥಾನ
ಟೀಮ್ ಇಂಡಿಯಾದ ವಿಕೆಟ್ ಟೇಕರ್ ಬೌಲರ್ ಮೊಹಮ್ಮದ್ ಸಿರಾಜ್ ಅವರು ಬೌಲಿಂಗ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಏಷ್ಯಾ ಕಪ್ನಲ್ಲಿ ಘಾತಕ ಸ್ಫೆಲ್ ನಡೆಸಿದ ಅವರು ವಿಶ್ವಕಪ್ನಲ್ಲಿ ಕೊಂಚ ಚಾರ್ಮ್ ಕಳೆದುಕೊಂಡಂತೆ ಕಾಣುತ್ತಿದೆ. ಒಂದೆರಡು ವಿಕೆಟ್ಗೇ ಮಾತ್ರ ಸೀಮಿತರಾಗುತ್ತಿದ್ದು ದುಬಾರಿಯಾಗುತ್ತಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ವುಡ್ 660 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. 659 ಅಂಕ ಪಡೆದ ಕಿವೀಸ್ನ ಟ್ರೆಂಟ್ ಬೌಲ್ಟ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಕುಲ್ದೀಪ್ ಯಾದವ್ 8ನೇ ಸ್ಥಾನ ಪಡೆದಿದ್ದಾರೆ.
ಶಕೀಬ್ ನಂ.1
ಬಾಂಗ್ಲಾದೇಶದ ಹಿರಿಯ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಅವರು ಆಲ್ರೌಂಡರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ರೇಟಿಂಗ್ ಅಂಕ 343. ಟೀಮ್ ಇಂಡೊಯಾದ ಉಪನಾಯಕ ಹಾರ್ದಿಕ್ ಪಾಂಡ್ಯ 229 ರೇಟಿಂಗ್ ಅಂಕದೊಂದಿಗೆ 9ನೇ ಸ್ಥಾನದಲ್ಲಿದ್ದಾರೆ. 181 ರೇಟಿಂಗ್ ಅಂಕ ಪಡೆದಿರುವ ರವೀಂದ್ರ ಜಡೇಜಾ 19ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.