Site icon Vistara News

Rohit Sharma : ಧೋನಿ, ಅಜರುದ್ದೀನ್​ ರೀತಿಯಲ್ಲೇ ಸಾಧನೆ ಮಾಡಿದ ರೋಹಿತ್​ ಶರ್ಮಾ; ಏನಿದು ದಾಖಲೆ?

Rohit Sharma

ನವ ದೆಹಲಿ: ಟೀಮ್ ಇಂಡಿಯಾ ಕೊನೆಗೂ ಬಹುರಾಷ್ಟ್ರೀಯ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದಿದೆ. ಈ ಮೂಲಕ ತಮ್ಮ ದೀರ್ಘಕಾಲದ ಕಾಯುವಿಕೆಯನ್ನು ಕೊನೆಗೊಳಿಸಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ರೋಹಿತ್​ ಶರ್ಮಾ (Rohit Sharma) ನೇತೃತ್ವದ ಭಾರತವು ಶ್ರೀಲಂಕಾವನ್ನು 10 ವಿಕೆಟ್ ಗಳಿಂದ ಸೋಲಿಸಿ ಎಂಟನೇ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವ ಕಪ್​ ಆರಂಭಕ್ಕೆ ಮೂರು ವಾರುಗಳು ಬಾಕಿ ಇರುವಾಗ ಈ ಖಂಡಾಂತರ (Rohit Sharma) ಟ್ರೋಫಿಯನ್ನು ಗೆಲ್ಲುವ ಮೂಲಕ ಭಾರತ ತಂಡದ ವಿಶ್ವಾಸ ಇಮ್ಮಡಿಯಾಗಿದೆ.

ಮೊಹಮ್ಮದ್ ಸಿರಾಜ್ 21ಕ್ಕೆ 6 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ತಂಡವನ್ನು 15.2 ಓವರ್​ಗಳಲ್ಲಿ 50 ರನ್​ಗಳಿಗೆ ಭಾರತ ತಂಡ ಆಲೌಟ್ ಮಾಡಿತು. ಏಷ್ಯಾಕಪ್ ಪಂದ್ಯದಲ್ಲಿ ಸಿರಾಜ್ ಭಾರತ ಪರ ಅತ್ಯುತ್ತಮ ಬೌಲಿಂಗ್ ದಾಖಲೆಯನ್ನು ಸೃಷ್ಟಿಸಿದರು. ಶ್ರೀಲಂಕಾ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿ ಕಳಪೆ ದಾಖಲೆ ಸೃಷ್ಟಿಸಿತು.

ಇದಕ್ಕೆ ಉತ್ತರವಾಗಿ ಭಾರತವು ಕೇವಲ 6.1 ಓವರ್​ಗಳಲ್ಲಿ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಅವರ ಆಕರ್ಷಕ ಶತಕದ ನೆರವಿನಿಂದ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯವು ಕೇವಲ 129 ಎಸೆತಗಳಲ್ಲಿ ಮುಕ್ತಾಯ ಕಂಡಿತು. 2023 ರ ಏಷ್ಯಾ ಕಪ್ ಫೈನಲ್ ಪಂದ್ಯವು ಮೂರನೇ ಅತಿ ಕಡಿಮೆ ಎಸೆತಗಳ ಏಕದಿನ ಪಂದ್ಯ ಎನಿಸಿಕೊಂಡಿತು. ಭಾರತವು ಉಳಿದಿರುವ ಎಸೆತಗಳ ಲೆಕ್ಕಚಾರದಲ್ಲಿ (263) ಸ್ವರೂಪದಲ್ಲಿ ಅತಿದೊಡ್ಡ ಗೆಲುವನ್ನು ದಾಖಲಿಸಿದೆ. 1998ರಲ್ಲಿ ಶಾರ್ಜಾದಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಜಯ ಸಾಧಿಸಿತ್ತು.

ರೋಹಿತ್ ವಿಶೇಷ ದಾಖಲೆ

ಈ ವಿಜಯದೊಂದಿಗೆ ರೋಹಿತ್ ಶರ್ಮಾ ಅವರು ಭಾರತ ತಂಡದ ಮಾಜಿ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತು ಮೊಹಮ್ಮದ್ ಅಜರುದ್ದೀನ್ ಅವರ ದಾಖಲೆಯನ್ನು ಸರಿಗಟ್ಟಿದರು. ಇದು ರೋಹಿತ್ ನಾಯಕತ್ವದಲ್ಲಿ ಎರಡನೇ ಏಷ್ಯಾ ಕಪ್ ಟ್ರೋಫಿಯಾಗಿದೆ. ಈ ಹಿಂದೆ 2018 ರಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದಾಗ ಮೊದಲ ಬಾರಿಗೆ ರೋಹಿತ್ ಏಷ್ಯಾ ಕಪ್ ಟ್ರೋಫಿ ಎತ್ತಿ ಹಿಡಿದಿದ್ದರು. ಈ ಮೂಲಕ ಒಂದಕ್ಕಿಂತ ಹೆಚ್ಚು ಏಷ್ಯಾಕಪ್ ಟ್ರೋಫಿಗಳನ್ನು ಗೆದ್ದ ಭಾರತದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದಾರೆ. ರೋಹಿತ್ ಮತ್ತು ಅಜರುದ್ದೀನ್ ಇಬ್ಬರೂ ಎರಡು ಫೈನಲ್​ಗಳಲ್ಲಿ (1991 ಮತ್ತು 1995) ಟ್ರೋಫಿಗಳನ್ನು ಗೆದ್ದರೆ, ಧೋನಿ ಮೂರು ಟ್ರೋಫಿಗಳನ್ನು ಗೆದ್ದುಕೊಂಡಿದ್ದಾರೆ.

Exit mobile version