Site icon Vistara News

Rohit Sharma: ಕ್ರಿಸ್​ ಗೇಲ್​ ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟ ಹಿಟ್​ಮ್ಯಾನ್​ ರೋಹಿತ್​

Rohit Sharma: Most sixes by a player in ODIs; Rohit Sharma edging closer to the top

ಕೊಲಂಬೊ: ಈಗಾಗಲೇ ಶ್ರೀಲಂಕಾ(india vs sri lanka) ವಿರುದ್ಧದ ಏಕದಿನ ಸರಣಿಯಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ನಾಯಕನಾಗಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿರುವ ರೋಹಿತ್​ ಶರ್ಮ(Rohit Sharma) ಇದೀಗ ಮತ್ತೊಂದು ಸಿಕ್ಸರ್​ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ನಾಳೆ(ಬುಧವಾರ) ನಡೆಯುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್​ 2 ಸಿಕ್ಸರ್​ ಬಾರಿಸಿದರೆ ವಿಂಡೀಸ್​ ದಿಗ್ಗಜ ಕ್ರೀಸ್​ ಗೇಲ್(chris gayle)​ ದಾಖಲೆಯೊಂದು ಪತನಗೊಳ್ಳಲಿದೆ.

ಹೌದು, ಲಂಕಾ ವಿರುದ್ಧದ ನಾಳಿನ ಪಂದ್ಯದಲ್ಲಿ ರೋಹಿತ್​ ಶರ್ಮ 2 ಸಿಕ್ಸರ್​ ಬಾರಿಸಿದರೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ(Most sixes in career in ODIs) ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್​ (331 ಸಿಕ್ಸರ್​) ದಾಖಲೆಯನ್ನು ಮುರಿಯಲಿದ್ದಾರೆ. ಸದ್ಯ ರೋಹಿತ್​ 330 ಸಿಕ್ಸರ್​ ಬಾರಿಸಿ ಮೂರನೇ ಸ್ಥಾನಿಯಾಗಿದ್ದಾರೆ. ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಆಟಗಾರ ಶಾಹೀದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 398 ಏಕದಿನ ಪಂದ್ಯಗಳನ್ನಾಡಿ 351 ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಕನಿಷ್ಠ 2 ವರ್ಷಗಳ ಕಾಲ ಏಕದಿನ ಆಡಿದರೆ ಈ ದಾಖಲೆಯನ್ನು ಮುರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಲಂಕಾ ವಿರುದ್ಧ ಆಡಿದ 2 ಏಕದಿನ ಪಂದ್ಯದಲ್ಲಿಯೂ ಅರ್ಧಶತಕ ಬಾರಿಸಿ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ನಲ್ಲಿರುವ ರೋಹಿತ್​ ಅಂತಿಮ ಏಕದಿನದಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ರೋಹಿತ್ 58 ರನ್‌ಗಳ ಇನಿಂಗ್ಸ್‌ ಆಡಿದ್ದರು. ಎರಡನೇ ಪಂದ್ಯದಲ್ಲಿ ಹಿಟ್‌ಮ್ಯಾನ್ 64 ರನ್‌ಗಳನ್ನು ಕಲೆ ಹಾಕಿದ್ದರು. ಮೊದಲ ಪಂದ್ಯ ಟೈ ಗೊಂಡು ದ್ವಿತೀಯ ಪಂದ್ಯದಲ್ಲಿ ಸೋಲು ಕಂಡಿರುವ ಭಾರತಕ್ಕೆ ಸರಣಿ ಸೋಲು ತಪ್ಪಿಸಲು ನಾಳೆಯ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಮೂರನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಹಲವು ಬದಲಾವಣೆ ಮಾಡುವ ಸಾಧ್ಯತೆ ಕಂಡುಬಂದಿದೆ. ಮೂಲಗಳ ಪ್ರಕಾರ ಆಯ್ಕೆ ಸಮಿತಿ ಕನ್ನಡಿಗ ಕೆ.ಎಲ್​ ರಾಹುಲ್(KL Rahul)​ ಅವರನ್ನು ಕೈ ಬಿಟ್ಟು ರಿಷಭ್​ ಪಂತ್​ಗೆ(Rishabh Pant) ಅವಕಾಶ ನೀಡಲಿದೆ ಎನ್ನಲಾಗಿದೆ.

ಇದನ್ನೂ ಓದಿ Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ರಾಹುಲ್​ ಕಳೆದ ದ್ವಿತೀಯ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದರು. ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿದ್ದರು. ಇದೀಗ ಸರಣಿ ಸೋಲಿನ ಭೀತಿಯಲ್ಲಿರುವ ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಎದುರಾಳಿ ಬೌಲರ್​ಗಳ ಲೆಕ್ಕಾಚಾರವನ್ನು ಬುಡಮೇಲು ಮಾಡುವಂತಹ ಪಂತ್​ ಅವರನ್ನು ಮೂರನೇ ಪಂದ್ಯದಲ್ಲಿ ಆಡಿಸಲು ತಂಡ ಮುಂದಾಗಿದೆ ಎಂದು ತಿಳಿದುಬಂದಿದೆ.

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನ ಪಿಚ್​ ಸಿನ್ನರ್​ಗಳಿಗೆ ಹೆಚ್ಚಿನ ನೆರವು ನೀಡುವ ಕಾರಣ ಶಿವಂ ದುಬೆ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅವರ ಬದಲಿಗೆ ಸ್ಪಿನ್​ ಆಲ್​ರೌಂಡರ್​ ಆಗಿರುವ ರಿಯಾನ್ ಪರಾಗ್ ಸ್ಥಾನ ಪಡೆಯಬಹುದು. ಟಿ20 ಸರಣಿಯಲ್ಲಿ ಬ್ಯಾಟಿಂಗ್​ ಜತೆಗೆ ಬೌಲಿಂಗ್​ನಲ್ಲಿಯೂ ಪರಾಗ್​ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಇವರಿಗೆ ಸ್ಥಾನ ಸಿಗುವುದು ಬಹುತೇಕ ಖಚಿತ.

Exit mobile version