ಕೋಲ್ಕೊತಾ: ವಿರಾಟ್ ಕೊಹ್ಲಿ(virat kohli) ಅವರು ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸಚಿನ್ ಅವರ ಏಕದಿನ ಕ್ರಿಕೆಟ್ನ 49ನೇ ಶತಕವನ್ನು ಸರಿಗಟ್ಟಿದ್ದರು. ವಿರಾಟ್ ಅವರು ಈ ಪಂದ್ಯದಲ್ಲಿ 121 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ ಅಜೇಯ 101 ರನ್ ಗಳಿಸಿದರು. ನಿಧಾನಗತಿಯ ಬ್ಯಾಟಿಂಗ್ ನಡೆಸಿದಕ್ಕಾಗಿ ಕೊಹ್ಲಿ ದಾಖಲೆಗಾಗಿಯೇ ಆಡುತ್ತಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ರೋಹಿತ್(Rohit Sharma) ಮತ್ತು ದ್ರಾವಿಡ್ ತಕ್ಕ ಉತ್ತರ ನೀಡಿದ್ದಾರೆ.
ಕೊಹ್ಲಿಯ ನಿಧಾನಗತಿಯ ಬ್ಯಾಟಿಂಗ್ ಕಂಡು ಕೆಲ ನೆಟ್ಟಿಗರು ಸ್ವಾರ್ಥಿ, ತನ್ನ ದಾಖಲೆಯ ಶತಕಕ್ಕಾಗಿ ಆಡಿದರು ಎಂದು ಹೇಳಿದ್ದರು. ಆದರೆ, ನಾಯಕ ರೋಹಿತ್ ಶರ್ಮ ಅವರು ಪಂದ್ಯ ಮುಕ್ತಾಯದ ಬಳಿಕ ಮಾತನಾಡಿ, ಪಿಚ್ ತುಂಬಾನೆ ವಿಭಿನ್ನವಾಗಿತ್ತು. ಬ್ಯಾಟಿಂಗ್ ಮಾಡಲು ತುಂಬಾ ಕಷ್ಟವಾಗುತ್ತಿತ್ತು. ಇಂತಹ ಪಿಚ್ನಲ್ಲಿ ವಿರಾಟ್ ಅವರು ಈ ಪ್ರದರ್ಶನ ತೋರಿದ್ದು ನಿಜಕ್ಕೂ ಗ್ರೇಟ್. ಕೊಹ್ಲಿ ಈ ಪಿಚ್ನ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡು ಬ್ಯಾಟಿಂಗ್ ನಡೆಸಿದ್ದಾರೆ ಎಂದು ಹೇಳುವ ಮೂಲಕ ಕೊಹ್ಲಿಯನ್ನು ಟೀಕಿಸಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.
ಇದನ್ನೂ ಓದಿ Virat Kohli: ‘ನಾನೇಕೆ ಕೊಹ್ಲಿಗೆ ಅಭಿನಂದಿಸಲಿ’; ಲಂಕಾ ನಾಯಕನ ದರ್ಪದ ಮಾತು
ನಂಬಿಕೆ ಉಳಿಸಿಕೊಂಡ ಅಯ್ಯರ್
ಸತತ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಬಗ್ಗೆಯೂ ರೋಹಿತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಯ್ಯರ್ ಅವರು ತಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದರು. ಆರಂಭಿಕ ಪಂದ್ಯಗಳಲ್ಲಿ ಅವರು ಕಳಪೆ ಬ್ಯಾಟಿಂಗ್ ನಡೆಸುವಾಗ ನಮ್ಮಲ್ಲಿ ಚಿಂತೆ ಮೂಡಿತ್ತು. ಆದರೆ ಈಗ ಈ ಚಿಂತೆ ದೂರವಾಗಿದೆ. ಅವರಿಂದ ಇನ್ನಷ್ಟು ಈ ರೀತಿಯ ಆಟ ಬರಬೇಕು ಎಂದರು.
ಜಡ್ಡು ಶ್ರೇಷ್ಠ ಪ್ರದರ್ಶನ
ಜಡೇಜಾ ಅವರು ಆಲ್ರೌಂಡರ್ ಸ್ಥಾನಕ್ಕೆ ತಕ್ಕ ಪ್ರದರ್ಶನ ತೋರುತ್ತಿರುವುದು ತಂಡಕ್ಕೆ ದೊಡ್ಡ ಬಲವಾಗಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗದಲ್ಲಿಯೂ ಅವರು ತಂಡಕ್ಕೆ ಶ್ರೇಷ್ಠ ಮಟ್ಟದ ಕೊಡುಗೆ ನೀಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿಯೂ ಜಡ್ಡು ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರಿಗೆ ತನ್ನ ಪಾತ್ರ ಏನು ಎಂಬುದು ಸ್ಪಷ್ಟವಾಗಿ ತಿಳಿದಿದೆ. ಅಲ್ಲದೆ ನಾವು ಅವರಿಂದ ಏನನ್ನು ನಿರೀಕ್ಷಿಸುತ್ತೇವೆ ಎಂಬುದು ಅವರಿಗೆ ತಿಳಿದಿದೆ ಎಂದು ರೋಹಿತ್ ಹೇಳಿದ್ದಾರೆ.
ಕೊಹ್ಲಿ ದಾಖಲೆಗೆ ಆಡುತ್ತಿಲ್ಲ; ಕೋಚ್ ದ್ರಾವಿಡ್
ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವಿರಾಟ್ ಅವರು ಯಾವುದೇ ದಾಖಲೆಗಾಗಿ ಆಡುತ್ತಿಲ್ಲ ಎಂದು ಹೇಳುವ ಮೂಲಕ ಕೊಹ್ಲಿಯನ್ನು ಟೀಕೆ ಮಾಡಿದರಿಗೆ ತಕ್ಕ ಉತ್ತರ ನೀಡಿದ್ದಾರೆ.
“ವಿರಾಟ್ ಕೊಹ್ಲಿ ದಾಖಲೆಗಳಿಗಾಗಿ ಆಡುವ ಆಟಗಾರ ಅಲ್ಲ. ಅವರಿಗೆ ತಂಡದ ಗೆಲುವೇ ಮುಖ್ಯ. ಕೊಹ್ಲಿ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಕೆಲವು ಪಿಚ್ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸುವ ಅನಿವಾರ್ಯತೆಯೂ ಇರುತ್ತದೆ. ಒಂದು ಪಂದ್ಯದಲ್ಲಿ ನಿಧಾನವಾಗಿ ಆಡಿದ ಕಾರಣಕ್ಕೆ ಯಾವುದೇ ಆಟಗಾರನನ್ನು ದಾಖಲೆಗಾಗಿ ಆಡಿದ್ದಾರೆ ಎನ್ನುವುದು ತಪ್ಪು ಕಲ್ಪನೆ” ಎಂದು ಹೇಳುವ ಮೂಲಕ ಕೊಹ್ಲಿ ಪ್ರದರ್ಶನಕ್ಕೆ ಬೆಂಬಲ ಸೂಚಿಸಿದ್ದಾರೆ.