ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತ ತಂಡದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿತು. ಹಿರಿಯ ಆಟಗಾರರನ್ನು ಟಿ20 ಸರಣಿಯಿಂದ ಕೈ ಬಿಟ್ಟು ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಜತೆಗೆ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ(T20 World Cup 2024) ಈಗ ತಂಡದಿಂದ ಹೊರಗಿಡಲ್ಪಟ್ಟ ಹಿರಿಯ ಆಟಗಾರನ್ನು ಆಯ್ಕೆ ಮಾಡುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಇದೇ ವಿಚಾರವಾಗಿ ರೋಹಿತ್(Rohit Sharma) ಸ್ಪಷ್ಟನೆ ನೀಡಿದ್ದಾರೆ.
ಅಮೆರಿಕದಲ್ಲಿ ನಡೆದ ಕ್ರಿಕೆಟ್ ಅಕಾಡೆಮಿ ಸಮಾರಂಭದಲ್ಲಿ ಮಾತನಾಡಿದ ರೋಹಿತ್ ಶರ್ಮ, ‘ತಾನು ಟಿ20 ಪಂದ್ಯಗಳನ್ನಾಡುವ ಭರವಸೆಯನ್ನು ಕಳೆದುಕೊಂಡಿಲ್ಲ. ಮುಂದಿನ ಬಾರಿಯ ಟಿ20 ವಿಶ್ವಕಪ್ ಟೂರ್ನಿಯನ್ನು ಎದುರು ನೋಡುತ್ತಿದ್ದೇನೆ” ಎಂದು ಹೇಳುವ ಮೂಲಕ ವಿಶ್ವಕಪ್ ಆಡುವ ಸುಳಿವನ್ನು ನೀಡಿದ್ದಾರೆ.
“ನಾನು ಅಮೆರಿಕಕ್ಕೆ ಬಂದಿದದ್ದು ಮೋಚು ಮಸ್ತಿ ಮಾಡಲು ಅಲ್ಲ. ಬದಲಾಗಿ ಇದಕ್ಕೆ ಒಂದು ಕಾರಣ ಇದೆ. ಮುಂದಿನ ವರ್ಷ ಇಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ನೀವೆಲ್ಲರೂ ಉತ್ಸುಕರಾಗಿದ್ದೀರಿ ಎಂದು ಭಾವಿಸುತ್ತೇನೆ. ನಾನು ಕೂಡ ಇದನ್ನು ಎದುರು ನೋಡುತ್ತಿದ್ದೇನೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸದ್ಯ ಭಾರತ ಆಡುತ್ತಿರುವ ಎಲ್ಲ ಟಿ20 ಸರಣಿಯಲ್ಲಿಯೂ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತ ಬಂದಿದ್ದಾರೆ. ಶುಭಮನ್ ಗಿಲ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹೀಗೆ ಮೊದಲಾದವರೆಲ್ಲ ಚುಟುಕು ಮಾದರಿಯ ಪಂದ್ಯಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಹೀಗಾಗಿ ರೋಹಿತ್, ಕೊಹ್ಲಿ, ಜಡೇಜಾ, ಶಮಿ ಸೇರಿ ಮೊದಲಾದ ಹಿರಿಯ ಆಟಗಾರರು ತಂಡದಿಂದ ದೂರ ಉಳಿದಿದ್ದಾರೆ.
ಇದನ್ನೂ ಓದಿ Rohit Sharma: ಅಮೆರಿಕದಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ರೋಹಿತ್ ಶರ್ಮ
ಏಷ್ಯಾಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ ಇಲ್ಲಿ ಉತ್ತಮ ಪ್ರದರ್ಶನ ತೋರಿ ಏಕದಿನ ಸರಣಿಗೆ ಭರ್ಜರಿ ತಯಾರಿ ನಡೆಸುವ ವಿಶ್ವಾಸದಲ್ಲಿದೆ. ಒಂದೊಮ್ಮೆ ರೋಹಿತ್ ನೇತೃತ್ವದಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದರೆ ಅವರ ನಾಯಕತ್ವ ಮತ್ತು ಟೀಮ್ ಇಂಡಿಯಾದ ಭವಿಷ್ಯದ ನಿರ್ಧಾರವಾಗಲಿದೆ. ವಿಶ್ವಕಪ್ನಲ್ಲಿ ಎಡವಿದರೆ ಅವರ ನಾಯಕತ್ವದ ಪಟ್ಟ ಕಳಚಿಕೊಳ್ಳುವುದು ಖಚಿತ. ಜತೆಗೆ ಟಿ20 ವಿಶ್ವಕಪ್ ಕನಸು ಕೂಡ ಭಗ್ನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. 2019ರ ಏಕದಿನ ವಿಶ್ವಕಪ್ನಲ್ಲಿ ರೋಹಿತ್ ಶರ್ಮ 5 ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.