Site icon Vistara News

Rohit Sharma:​ ಶೀಘ್ರದಲ್ಲೇ ಟಿ20 ಕ್ರಿಕೆಟ್​ಗೆ ರೋಹಿತ್ ಗುಡ್‌ ಬೈ ಹೇಳುವುದು ಖಚಿತ!

Rohit Sharma

ಮುಂಬಯಿ: ಕಳೆದ ಒಂದು ವರ್ಷಗಳಿಂದ ಭಾರತ ಪರ ಟಿ20 ಕ್ರಿಕೆಟ್​ ಆಡದ ರೋಹಿತ್​ ಶರ್ಮ(Rohit Sharma) ಅವರು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ನಲ್ಲಿ(T20 World Cup 2024) ಆಡಲಿದ್ದಾರ? ಇಲ್ಲವಾ? ಎಂಬ ಚರ್ಚೆಗಳು ಕಳೆದೊಂದು ತಿಂಗಳಿನಿಂದ ಬಾರಿ ಸದ್ದು ಮಾಡುತ್ತಿವೆ. ಇದೀಗ ಈ ವಿಚಾರದಲ್ಲಿ ಕ್ಲ್ಯಾರಿಟಿ ಸಿಕ್ಕಂತಿದೆ.

ಶುಕ್ರವಾರ ಅಚ್ಚರಿ ಎಂಬಂತೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನಾಯಕನನ್ನಾಗಿ ನೇಮಿಸಿ, ರೋಹಿತ್​ ಅವರನ್ನು ಈ ಸ್ಥಾನದಿಂದ ಕೆಳಗಿಳಿಸಲಾಗಿದೆ. ಇದು ರೋಹಿತ್‌ ಶರ್ಮ ಅವರ ಟಿ20 ಕ್ರಿಕೆಟ್‌ ಬಾಳ್ವೆ ಬಹುತೇಕ ಕೊನೆಗೊಂಡಿರುವ ಸುಳಿವೊಂದನ್ನು ನೀಡಿದೆ.

ಕೆಲ ದಿನಗಳ ಹಿಂದೆ ರೋಹಿತ್​ ಅವರ ಟಿ20 ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಹೇಳಿಕೆಯೊಂದನ್ನು ನೀಡಿದ್ದರು. ‘ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಅವರ ಸ್ಥಾನದ ಬಗ್ಗೆ ಈಗಲೇ ಭರವಸೆ ನೀಡಲಾಗುವುದಿಲ್ಲ’ ಎಂದು ಪಿಟಿಐ ಜತೆಗಿನ ಸಂದರ್ಶನದಲ್ಲಿ ಹೇಳಿದ್ದರು. ಇದಕ್ಕೂ ಮುನ್ನ ಬಿಸಿಸಿಐ(BCCI), ದಕ್ಷಿಣ ಆಫ್ರಿಕಾ ನಡುವಣ ಕ್ರಿಕೆಟ್​ ಸರಣಿ ಮುಕ್ತಾಯದ ಬಳಿಕ ಕೊಹ್ಲಿ ಮತ್ತು ರೋಹಿತ್(Virat Kohli-Rohit Sharma)​ ಜತೆ ತಮ್ಮ ಟಿ20 ಕ್ರಿಕೆಟ್​ ಭವಿಷ್ಯದ ಬಗ್ಗೆ ಚರ್ಚಿಸಿ ಸ್ಪಷ್ಟ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎಂದು ವರದಿಯಾಗಿತ್ತು. ಟಿ20 ವಿಶ್ವಕಪ್​ ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿದೆ. ಸದ್ಯದ ಪ್ರಕಾರ ಈ ಟೂರ್ನಿ ಜೂನ್​ನಲ್ಲಿ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ Rohit Sharma: ಜಯ್​ ಶಾ ಕೈಯಲ್ಲಿದೆ ರೋಹಿತ್​ ಟಿ20 ವಿಶ್ವಕಪ್ ಭವಿಷ್ಯ!

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್​ನಲ್ಲಿ ನಿರ್ಗಮಿಸಿತ್ತು. ರೋಹಿತ್​ ಶರ್ಮ ಸಾರಥ್ಯದಲ್ಲಿ ಭಾರತ ತಂಡ ಕಣಕ್ಕಿಳಿದಿತ್ತು. ಆದರೆ ಈ ಸೋಲಿನ ಬಳಿಕ ರೋಹಿತ್ ಇದುವರೆಗೂ ಒಂದೇ ಒಂದು ಟಿ20 ಪಂದ್ಯವನ್ನು ಕೂಡ ಆಡಿಲ್ಲ. ಅಂದಿನಿಂದಲೂ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಜತೆಗೆ ಯುವ ಆಟಗಾರರೇ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್​ ಟೂರ್ನಿಯಲ್ಲೂ ರೋಹಿತ್ ಸೇರಿ ಕೆಲ ಹಿರಿಯ ಆಟಗಾರರು ಆಡುವುದು ಬಹುತೇಕ ಅನುಮಾನ ಎನ್ನಲಾಗಿದೆ.

ರೋಹಿತ್​ಗೂ ಆಸಕ್ತಿ ಇಲ್ಲ

ಇನ್ನೊಂದು ಮೂಲಗಳ ಪ್ರಕಾರ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಿಂದ ಈಗಾಗಲೇ ದೂರ ಉಳಿಯಲು ನಿರ್ಧರಿಸಿದ್ದು ಕೇವಲ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಏಕದಿನ ವಿಶ್ವಕಪ್​ ಸೋಲಿನ ಬಳಿಕವೇ ಉಭಯ ಆಟಗಾರರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಉಭಯ ಆಟಗಾರರು ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಇದುವರೆಗೆ ಹೇಳಿಲ್ಲ. ಕೆಲ ದಿನಗಳಲ್ಲಿ ಈ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯಿಲ್ಲ.

Exit mobile version