ಬೆಂಗಳೂರು: ಅಫಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ತವರಿನ ಟಿ20 ಸರಣಿ ಜನವರಿ 11ರಿಂದ ಆರಂಭಗೊಳ್ಳಲಿದೆ. ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ವಿಶೇಷ ಮೈಲಿಗಲ್ಲು ನಿರ್ಮಿಸುವ ಸನಿಹದಲ್ಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 582 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮ, ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಒಟ್ಟು 18 ಸಿಕ್ಸರ್ ಬಾರಿಸಿದರೆ 600 ಸಿಕ್ಸರ್ಗಳನ್ನು ಪೂರ್ತಿಗೊಳಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ.
ಸದ್ಯ 486 ಇನಿಂಗ್ಸ್ ಆಡಿರುವ ರೋಹಿತ್ ಇದುವರೆಗೆ ಟೆಸ್ಟ್ನಲ್ಲಿ 77, ಏಕದಿನದಲ್ಲಿ 323, ಟಿ20ಯಲ್ಲಿ 182 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 600 ಸಿಕ್ಸರ್ಗಳಿಗೆ ಇನ್ನು 18 ಸಿಕ್ಸರ್ಗಳ ಅಗತ್ಯವಿದೆ. ಸರಿ ಸುಮಾರು ಒಂದುವರೆ ವರ್ಷಗಳ ಬಳಿಕ ರೋಹಿತ್ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿ ಇದಾಗಿದೆ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಆಡಿದ ಬಳಿಕ ರೋಹಿತ್ ಭಾರತ ತಂಡದ ಪರ ಯಾವುದೇ ಟಿ20 ಪಂದ್ಯ ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸುತ್ತಿದ್ದರು.
ಗೊಂದಲಗಳಿಗೆ ತೆರೆ
ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ನಿಂದ ದೂರ ಸರಿಯಲಿದ್ದಾರೆ, ಟಿ20 ವಿಶ್ವಕಪ್ ಆಡುವುದು ಅನುಮಾನ ಎನ್ನಲಾಗಿತ್ತು. ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ರೋಹಿತ್ ಅಫಘಾನಿಸ್ತಾನ ತಂಡಕ್ಕೆ ಆಯ್ಕೆಯಾಗುವ ಜತೆಗೆ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಂತಿದೆ. ರೋಹಿತ್ ಅವರೇ ಟಿ20 ವಿಶ್ವಕಪ್ನಲ್ಲಿ ತಂಡವನ್ನು ಮುನ್ನಡೆಸುವ ಸೂಚನೆ ಲಭಿಸಿದೆ.
ಇದನ್ನೂ ಓದಿ Rohit Sharma: ಕೂಲ್ ಕ್ಯಾಪ್ಟನ್ ಧೋನಿಯ ದಾಖಲೆ ಸರಿಗಟ್ಟಿದ ಹಿಟ್ ಮ್ಯಾನ್ ರೋಹಿತ್
ಅಫಘಾನಿಸ್ತಾನ ಸರಣಿಗೆ ಭಾರತ ತಂಡ
ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.
What do you all make of this power-packed T20I squad set to face Afghanistan? 😎#TeamIndia | #INDvAFG | @IDFCFIRSTBank pic.twitter.com/pY2cUPdpHy
— BCCI (@BCCI) January 7, 2024
ರಾಹುಲ್ಗೆ ಕೊಕ್!
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮತ್ತು ಸೆಂಚೂರಿಯನ್ನಲ್ಲಿ ಶತಕ ಬಾರಿಸಿದ್ದ ಕೆ.ಎಲ್ ರಾಹುಲ್ ಅವರು ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಲಿಲ್ಲ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಆಯ್ಕೆದಾರರು ಆರಂಭಿಕ ಮತ್ತು ಮಧ್ಯಮ ಕ್ರಮಾಂಕದ ಸ್ಥಾನಗಳಿಗೆ ಇತರ ಆಯ್ಕೆಗಳನ್ನು ಬಯಸಿದ್ದರಿಂದ ರಾಹುಲ್ ಟಿ20 ಸರಣಿಗೆ ಅನುಮತಿ ನೀಡಲಾಗಿಲ್ಲ ಎಂದು ತಿಳಿಸಿದೆ.