ಪ್ರೊವಿಡೆನ್ಸ್: ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅರ್ಥಶತಕ ಬಾರಿಸಿದ ಟೀಮ್ ಇಂಡಿಯಾ ಕಪ್ತಾನ ರೋಹಿತ್ ಶರ್ಮ(Rohit Sharma) ಅವರು ವಿರಾಟ್ ಕೊಹ್ಲಿ(Virat Kohli), ಮಹೇಂದ್ರ ಸಿಂಗ್ ಧೋನಿ(MS Dhoni) ಜತೆಗಿನ ದಾಖಲೆಯೊಂದರ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಗುರುವಾರ ತಡರಾತ್ರಿ ಪ್ರೊವಿಡೆನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 171 ರನ್ ಬಾರಿಸಿ ಸವಾಲೊಡ್ಡಿತು. ಜವಾಬಿತ್ತ ಇಂಗ್ಲೆಂಡ್ ನಾಟಕೀಯ ಕುಸಿತ ಕಂಡು 16.4 ಓವರ್ಗಳಲ್ಲಿ 103 ರನ್ಗೆ ಸರ್ವಪತನ ಕಂಡಿತು.
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ಅವರು 37 ರನ್ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್ ಸೇರಿ 5 ಸಾವಿರ ರನ್ ಪೂರೈಸಿದರು. ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. ವಿರಾಟ್ ಕೊಹ್ಲಿ(12883) ಮೊದಲ ಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್(11207) ದ್ವಿತೀಯ ಸ್ಥಾನಿಯಾಗಿದ್ದಾರೆ.
ಇದನ್ನೂ ಓದಿ Rohit Sharma: ತಂಡ ಫೈನಲ್ ಪ್ರವೇಶಿಸಿದ ಖುಷಿಯಲ್ಲಿ ಕಣ್ಣೀರು ಹಾಕಿದ ರೋಹಿತ್; ವಿಡಿಯೊ ವೈರಲ್
5 ರನ್ ಗಳಿಸಿದ್ದ ವೇಳೆ ಫಿಲ್ ಸಾಲ್ಟ್ ಅವರಿಂದ ಕ್ಯಾಚ್ ಕೈಚೆಲ್ಲಿ ಜೀವದಾನ ಪಡೆದ ರೋಹಿತ್, ಇದರ ಸಂಪೂರ್ಣ ಲಾಭವೆತ್ತಿದರು. 33 ಎಸೆತಗಳಿಂದ ಅರ್ಧಶತಕ ಬಾರಿಸಿ ಮಿಂಚಿದರು. ಇದು ರೋಹಿತ್ ಅವರ 32ನೇ ಅಂತಾರಾಷ್ಟ್ರೀಯ ಟಿ20 ಅರ್ಧಶತಕ. ಅಂತಿಮವಾಗಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಆದೀಲ್ ರಶೀದ್ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಭಾರತ ಪರ 5 ಸಾವಿರ ರನ್ ಗಳಿಸಿದ ನಾಯಕರು
ವಿರಾಟ್ ಕೊಹ್ಲಿ-12,883 ರನ್
ಮಹೇಂದ್ರ ಸಿಂಗ್ ಧೋನಿ-11,207 ರನ್
ಮೊಹಮ್ಮದ್ ಅಜರುದ್ದೀನ್-8,095 ರನ್
ಸೌರವ್ ಗಂಗೂಲಿ-7,643 ರನ್
ರೋಹಿತ್ ಶರ್ಮ-5,033* ರನ್
ಜಯವರ್ಧನೆ ದಾಖಲೆ ಪತನ
ರೋಹಿತ್ ಈ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಹೆಸರಿನಲ್ಲಿತ್ತು. ಜಯವರ್ಧನೆ 111 ಬೌಂಡರಿ ಬಾರಿಸಿದ್ದರು. ಈ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ರೋಹಿತ್ ಅವರ ಬೌಂಡರಿಗಳ ಸಂಖ್ಯೆ 91 ಇತ್ತು. ಸದ್ಯ ರೋಹಿತ್ ಅವರ ಬೌಂಡರಿಗಳ ಸಂಖ್ಯೆ 113*ಕ್ಕೆ ಏರಿಕೆಯಾಗಿದೆ. ಫೈನಲ್ ಪಂದ್ಯವನ್ನು ಆಡಲಿರುವ ಕಾರಣ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು.