ನ್ಯೂಯಾರ್ಕ್: ಸತತ ಮೂರು ಗೆಲುವು ಸಾಧಿಸಿ ಸೂಪರ್-8 ಪ್ರವೇಶ ಪಡೆದಿದ್ದರೂ ಕೂಡ ಟೀಮ್ ಇಂಡಿಯಾದ(Team India) ನಾಯಕ ರೋಹಿತ್ ಶರ್ಮ(Rohit Sharma) ಅವರು ನ್ಯೂಯಾರ್ಕ್ನಲ್ಲಿ ಆಡಿದ್ದು ನಿಜಕ್ಕೂ ಸವಾಲಿನಿಂದ ಕೂಡಿತ್ತು ಎಂದು ಹೇಳಿದ್ದಾರೆ.
ಅಮೆರಿಕ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ರೋಹಿತ್, ನಾವು ಮೂರು ಪಂದ್ಯಗಳನ್ನು ಗೆದ್ದಿರಬಹುದು ಆದರೆ ಈ ಪಂದ್ಯ ಗೆಲ್ಲಲು ನಾವು ಪಟ್ಟ ಕಷ್ಟ ನಮ್ಮ ತಂಡದ ಆಟಗಾರರಿಗೆ ಮಾತ್ರ ಗೊತ್ತು. ಇಲ್ಲಿ ಯಾವ ತಂಡ ಗೆಲ್ಲಬಹುದು ಎನ್ನುವುದನ್ನು ಊಹಿಸಲು ಕೂಡ ಅಸಾಧ್ಯ. ನಮ್ಮ ತಂಡದ ಗೆಲುವು ಅಷ್ಟು ಸುಲಭವಾಗಿರಲಿಲ್ಲ” ಎಂದು ಹೇಳಿದರು.
ರೋಹಿತ್ ಅವರು ಈ ಹಿಂದೆಯೇ ನಸೌ ಪಿಚ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಪಿಚ್ ಮತ್ತು ಮೈದಾನ ಕ್ರಿಕೆಟ್ ಆಡಲು ಸೂಕ್ತವಾಗಿಲ್ಲ. ಆಟಗಾರರು ಗಾಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಿದ್ದರು. ಭಾರತ ಸೂಪರ್-8 ಹಂತದ ಪಂದ್ಯಗಳನ್ನು ಕೂಡ ಇಲ್ಲೇ ಆಡಲಿದೆ. ಇದು ಭಾರತಕ್ಕೆ ದೊಡ್ಡ ಚಿಂತೆಗೀಡು ಮಾಡಿದೆ. ಸೂಪರ್-8 ಹಂತದಲ್ಲಿ ಬಲಿಷ್ಠ ತಂಡಗಳ ಸವಾಲು ಎದುರಾಗಲಿದೆ.
ಇದನ್ನೂ ಓದಿ Rajal Arora: ಟೀಮ್ ಇಂಡಿಯಾ ಜತೆಗಿರುವ ಏಕೈಕ ಮಹಿಳಾ ಸಿಬ್ಬಂದಿ ಯಾರು? ಇವರ ಕೆಲಸವೇನು?
ನ್ಯೂಯಾರ್ಕ್ ಪಿಚ್ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಗೆ ಅನಧಿಕೃತ ದೂರು ಕೂಡ ನೀಡಿದೆ. ಅಪಾಯಕಾರಿ ಪಿಚ್‌ನಲ್ಲಿ ರೋಹಿತ್ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಇದು ಮಾತ್ರವದಲ್ಲದೆ ಹಲವು ಆಟಗಾರರ ಬ್ಯಾಟ್ ಕೂಡ ಮುರಿದಿತ್ತು. ಚೆಂಡು ಯಾವ ರೀತಿ ಪುಡಿದೇಳುತ್ತದೆ ಎನ್ನುವುದನ್ನು ಬ್ಯಾಟರ್ಗಳಿಗೆ ಊಹಿಸಲು ಸಾಧ್ಯವಾಗುತ್ತಿಲ್ಲ. ಇದುವರೆಗೂ ಇಲ್ಲಿ ನಡೆದ ಪಂದ್ಯಗಳಲ್ಲಿ ಕನಿಷ್ಠ 120ರ ಗಡಿ ಕೂಡ ದಾಟಿಲ್ಲ.
ಅಡಿಲೇಡ್ ಓವಲ್ ನ ಗ್ರೌಂಡ್ಸ್‌ಮ್ಯಾನ್ ಡೇಮಿಯನ್ ಹ್ಯೂಗ್ ಅವರ ಉಸ್ತುವಾರಿಯಲ್ಲಿ ಇಲ್ಲಿನ ಟ್ರ್ಯಾಕ್ ನಿರ್ಮಾಣಗೊಂಡರೂ ಇದು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅನಿರೀಕ್ಷಿತ ಬೌನ್ಸ್ ಬ್ಯಾಟರ್‌ಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಸೂಪರ್-8ಗೆ ಲಗ್ಗೆಯಿಟ್ಟ ಭಾರತ
ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 110 ರನ್ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್ ಎದುರಿಸಿ 3 ವಿಕೆಟ್ ಕಳೆದುಕೊಂಡು 111 ರನ್ ಬಾರಿಸಿ ಗೆಲುವಿನ ದಡ ಸೇರಿತು.