ಗ್ರಾಸ್ ಐಲೆಟ್ (ಸೇಂಟ್ ಲೂಸಿಯ): ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರ ಸಿಡಿಲಬ್ಬರದ ಬ್ಯಾಟಿಂಗ್ ಸಾಹಸದ ನೆರವಿನಿಂದ ಆಸ್ಟ್ರೇಲಿಯಾ(Australia vs India) ವಿರುದ್ಧ ಸೋಮವಾರ ನಡೆದ ಟಿ20 ವಿಶ್ವಕಪ್(T20 World Cup 2024) ಸೂಪರ್-8 ರೋಚಕ ಪಂದ್ಯದಲ್ಲಿ ಭಾರತ ತಂಡ 24 ರನ್ ಗಳ ಅಮೋಘ ಜಯ ಸಾಧಿಸಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ಈ ಪಂದ್ಯವನ್ನು ಗೆಲ್ಲುವು ಮೂಲಕ ರೋಹಿತ್ ಶರ್ಮ ಅವರು ಪಾಕ್ ನಾಯಕ ಬಾಬರ್ ಅಜಂ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಪಂದ್ಯ ಗೆದ್ದ ನಾಯಕ ಎಂಬ ಹಿರಿಮೆಗೆ ರೋಹಿತ್ ಪಾತ್ರರಾಗಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ 60 ಪಂದ್ಯಗಳನ್ನು ಆಡಿ 48 ಪಂದ್ಯಗಳನ್ನು ಗೆದ್ದಿದೆ. ಬಾಬರ್ ಅಜಂ ಕೂಡ ನಾಯಕನಾಗಿ 48 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ, 85 ಪಂದ್ಯಗಳನ್ನು ಆಡಿದ್ದಾರೆ. ಹೀಗಾಗಿ ಈ ಪಟ್ಟಿಯಲ್ಲಿ ರೋಹಿತ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ರೋಹಿತ್ 8 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಟಿ20 ಮಾದರಿಯ ಕ್ರಿಕೆಟ್ನಲ್ಲಿ 200 ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದ ಮೊದಲ ಆಟಗಾರ ಎನಿಸಿಕೊಂಡರು. ಸದ್ಯ ರೋಹಿತ್ 203* ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದು ಮಾತ್ರವದಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿಯೂ ರೋಹಿತ್ ಹೊರಹೊಮ್ಮಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 4165 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 4145 ಹಾಗೂ ವಿರಾಟ್ ಕೊಹ್ಲಿ 4103 ರನ್ಗಳೊಂದಿಗೆ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
ಪಂದ್ಯ ಗೆದ್ದ ಭಾರತ
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 205 ರನ್ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಆಸೀಸ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಗಿ ಸೋಲು ಕಂಡಿತು. ಕಳೆದ ವರ್ಷ ನೆಡೆದಿದ್ದ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡನ್ನು ಭಾರತ ಇಲ್ಲಿ ತೀರಿಸಿಕೊಂಡಿತು.
ರೋಹಿತ್ 41 ಎಸೆತಗಳಲ್ಲಿ 92 ರನ್ ಬಾರಿಸಿ ಟಿ20 ವಿಶ್ವಕಪ್‌ನಲ್ಲಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿದರು. ಅದರಲ್ಲೂ ಸ್ಟಾರ್ಕ್ ಅವರ 3ನೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಚಚ್ಚಿದರು. ರೋಹಿತ್ ತಮ್ಮ 92 ರನ್ನುಗಳ ಸೊಗಸಾದ ಬ್ಯಾಟಿಂಗ್ ವೇಳೆ 8 ಸಿಕ್ಸರ್ ಮತ್ತು 7 ಬೌಂಡರಿ ಹೊಡೆದರು.