ಬಾರ್ಬಡೋಸ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಅವರು ವಿಂಡೀಸ್(West Indies vs India, 1st ODI) ವಿರುದ್ಧದ ಏಕದಿನ ಸರಣಿಯಲ್ಲಿ ನೂತನ ದಾಖಲೆಯೊಂದರ ಮೇಲೆ ಕಣ್ಣಿಟ್ಟಿದ್ದಾರೆ. ರೋಹಿತ್ ಈ ಸರಣಿಯಲ್ಲಿ 175 ರನ್ ಬಾರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ಸಚಿನ್ ತೆಂಡೂಲ್ಕರ್(Sachin Tendulkar) ಅವರನ್ನು ಹಿಂದಿಕ್ಕಲಿದ್ದಾರೆ. ವಿರಾಟ್ ಕೊಹ್ಲಿ(virat kohli) ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈ ಮೈಲುಗಲ್ಲನ್ನು ಕೇವಲ 213 ಪಂದ್ಯಗಳಲ್ಲಿ ಮಾಡಿದ್ದಾರೆ.
ರೋಹಿತ್ ಅವರು ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ಗಳ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡರೆ ಈ ಸಾಧನೆ ಮಾಡಿದ ಆರನೇ ಭಾರತೀಯ ಮತ್ತು ಒಟ್ಟಾರೆ 15ನೇ ಆಟಗಾರನೆಂಬ ದಾಖಲೆ ಬರೆಯಲ್ಲಿದ್ದಾರೆ. ಟೆಸ್ಟ್ ಸರಣಿಯಲ್ಲಿ ಶತಕ ಮತ್ತು ಅತಿ ವೇಗದ ಅರ್ಧಶತಕ ಬಾರಿಸಿ ದಾಖಲೆ ಬರೆದಿದ್ದ ರೋಹಿತ್ ಅವರ ಬ್ಯಾಟಿಂಗ್ ಫಾರ್ಮ್ ಉತ್ತಮವಾಗಿರುವ ಕಾರಣ ಏಕದಿನದಲ್ಲಿಯೂ ಅವರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚಿನ ಬರವಸೆ ಇರಿಸಿದೆ.
ರೋಹಿತ್ ಶರ್ಮ ಅವರು ಸದ್ಯ 243 ಏಕದಿನ ಪಂದ್ಯಗಳನ್ನು ಆಡಿದ್ದು 9825* ರನ್ ಬಾರಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 3 ದ್ವಿಶತಕ ಒಳಗೊಂಡಿದೆ. ಏಕದಿನದಲ್ಲಿ ಅತ್ಯಧಿಕ ದ್ವಿಶತಕ ಬಾರಿಸಿದ ಏಕೈಕ ಆಟಗಾರ ಎಂಬ ಹಿರಿಮೆಯೂ ರೋಹಿತ್ ಪಾಲಿಗಿದೆ. 264 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಭಾರತ ಮತ್ತು ವಿಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂ(Kensington Oval, Bridgetown, Barbados)ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನದಂತೆ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಇದನ್ನೂ ಓದಿ Virat Kohli: ಸಚಿನ್ ವಿಶ್ವ ದಾಖಲೆ ಮುರಿಯಲು ಸಜ್ಜಾದ ಕಿಂಗ್ ಕೊಹ್ಲಿ
ವಿಶ್ವ ದಾಖಲೆ ಸನಿಹ ಕೊಹ್ಲಿ
ವಿರಾಟ್ ಕೊಹ್ಲಿ ಅವರು ಇದೇ ಸರಣಿಯಲ್ಲಿ 102 ರನ್ ಬಾರಿಸಿದರೆ ಏಕದಿನ ಮಾದರಿಯಲ್ಲಿ 13 ಸಾವಿರ ರನ್ ಪೂರ್ತಿಗೊಳಿಸಲಿದ್ದಾರೆ. ಇದೇ ವೇಳೆ ಸಚಿನ್ ಅವರ ಹೆಸರಿನಲ್ಲಿದ ದಾಖಲೆ ಮುರಿಯಲಿದ್ದಾರೆ. ಅತಿ ಕಡಿಮೆ ಏಕದಿನ ಪಂದ್ಯಗಳಲ್ಲಿ 13 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಸಚಿನ್ ಅವರ ದಾಖಲೆ ಮುರಿಯಲಿದ್ದಾರೆ. ಸಚಿನ್ ಅವರು 321 ಪಂದ್ಯಗಳನ್ನು ಆಡುವ ಮೂಲಕ ಈ ದಾಖಲೆ ಬರೆದಿದ್ದರು. ಸದ್ಯ 274 ಏಕದಿನ ಪಂದ್ಯ ಆಡಿರುವ ಕೊಹ್ಲಿಗೆ ಈ ಸರಣಿಯಲ್ಲಿ ಸಚಿನ್ ದಾಖಲೆ ಮುರಿಯಬಹುದಾಗಿದೆ.