Site icon Vistara News

Rohit Sharma: ಟಿ20 ವಿಶ್ವಕಪ್​ ಬಗ್ಗೆ ನಗುತ್ತಲೇ ಮಹತ್ವದ ಸುಳಿವು ನೀಡಿದ ರೋಹಿತ್​

Rohit Sharma in pre-match press conference

ಜೊಹಾನ್ಸ್​ಬರ್ಗ್​: ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್​ನಲ್ಲಿ(t20 world cup 2024) ತಮ್ಮ ಉಪಸ್ಥಿತಿಯ ಕುರಿತು ರೋಹಿತ್​ ಶರ್ಮಾ(Rohit Sharma) ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ(ಮಂಗಳವಾರ)ಯಿಂದ ಆರಂಭವಾಗಲಿರುವ(South Africa vs India, 1st Test) ಬಾಕ್ಸಿಂಗ್​ ಡೇ ಟೆಸ್ಟ್(boxing day test)​ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ರೋಹಿತ್​ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಟೆಸ್ಟ್​ ಸರಣಿಯ ಕುರಿತಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರೋಹಿತ್​ ಶರ್ಮಾ ಅವರು ಕಳೆದ ಏಕದಿನ ವಿಶ್ವಕಪ್ ಫೈನಲ್​ ಪಂದ್ಯದ​ ಸೋಲಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಇದೇ ವೇಳೆ ಪತ್ರಕರ್ತರು ರೋಹಿತ್​ ಬಳಿ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವ ಖಚಿತತೆಯನ್ನು ಪಡೆಯುವ ನಿಟ್ಟಿನಲ್ಲಿ ಪ್ರಶ್ನೆಯನ್ನು ಕೇಳಲು ಮುಂದಾದರು. ಪತ್ರಕರ್ತರ ಹಾವ-ಭಾವ ಕಂಡು ಯಾವ ಪ್ರಶ್ನೆಯನ್ನು ಕೇಳುತ್ತಾರೆ ಎನ್ನುವುದನ್ನು ಮೊದಲೆ ಅರಿತುಕೊಂಡ ರೋಹಿತ್​, ಪ್ರಶ್ನೆಗೂ ಮುನ್ನವೇ “ಮುಜೆ ಪತಾ ಹೈ ಆಪ್ ಕ್ಯಾ ಕೆಹನಾ ಚಾಹ್ರೆ ಹೋ, ಮಿಲೇಗಾ ಆಪ್ಕೋ ಜವಾಬ್ (ನೀವು ಏನು ಕೇಳಲು ಮತ್ತು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಿಮಗೆ ಆದಷ್ಟು ಬೇಗ ಉತ್ತರ ಸಿಗಲಿದೆ)” ಎಂದು ನಗುತ್ತಲೇ ಉತ್ತರಿಸಿದರು. ಇದೇ ವೇಳೆ ಪತ್ರಕರ್ತರು ಕೂಡ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಇದನ್ನೂ ಓದಿ IND vs SA: ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಹರಿಣ ಪಡೆಗೆ ಸೋಲಿನ ಪಂಚ್​ ನೀಡೀತೇ ಭಾರತ?

ರೋಹಿತ್​ ಅವರ ಈ ಉತ್ತರವನ್ನು ನೋಡುವಾಗ ಅವರು ಶೀಘ್ರದಲ್ಲೇ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೊಂದುವ ಸೂಚನೆಯೊಂದು ಲಭಿಸಿದೆ. ಅಲ್ಲದೆ ಅವರು ಭಾರತ ಪರ ಟಿ20 ಕ್ರಿಕೆಟ್​ ಆಡದೆ ಒಂದು ವರ್ಷ ಕಳೆದಿದೆ. ರೋಹಿತ್​ ಕೊನೆಯ ಬಾರಿ ಟಿ20 ಆಡಿದ್ದು 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ. ಇಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ ಸೆಮಿಫೈನಲ್​ನಲ್ಲಿ ಸೋತು ನಿರ್ಗಮಿಸಿತ್ತು. ಇದಾದ ಬಳಿಕ ಅವರು ಆಡಿಲ್ಲ.

“ವಿಶ್ವಕಪ್ ಸೋಲನ್ನು ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯ ಮೂಲಕ ಸರಿದೂಗಿಸಲು ಸಾಧ್ಯವೇ ಎಂದು ನನಗೆ ನಿಜಕ್ಕೂ ತಿಳಿದಿಲ್ಲ. ಏಕೆಂದರೆ ವಿಶ್ವಕಪ್​ಗೆ ಇರುವ ಮಹತ್ವದ ದ್ವಿಪಕ್ಷೀಯ ಸರಣಿಗಳಿಗಿಲ್ಲ. ವಿಶ್ವಕಪ್​ಗೂ ಈ ಸರಣಿಗೂ ಹೋಲಿಕೆ ಮಾಡುವುದು ಸರಿಯಲ್ಲ. ಆದರೆ, ಒಂದಂತು ನಿಜ ನಮ್ಮ ತಂಡದ ಆಟಗಾರರು ವಿಶ್ವಕಪ್​ ಸೋಲಿನಿಂದ ಈಗಲೂ ಹತಾಶರಾಗಿದ್ದಾರೆ’ ಎಂದು ರೋಹಿತ್​ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ ದಕ್ಷಿಣ ಆಫ್ರಿಕಾದ ಟೆಸ್ಟ್​ ಸರಣಿ ಭಾರತದ ಪಾಲಿನ ಕಬ್ಬಿಣದ ಕಡಲೆ; ಹೇಗಿದೆ ಇತಿಹಾಸ?

ರೋಹಿತ್​ಗೂ ಮನಸ್ಸಿಲ್ಲ

ಇನ್ನೊಂದು ಮೂಲಗಳ ಪ್ರಕಾರ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಟಿ20 ಕ್ರಿಕೆಟ್​ನಿಂದ ಈಗಾಗಲೇ ದೂರ ಉಳಿಯಲು ನಿರ್ಧರಿಸಿದ್ದು ಕೇವಲ ಟೆಸ್ಟ್​ ಮತ್ತು ಏಕದಿನ ಕ್ರಿಕೆಟ್​ಗೆ ಮಾತ್ರ ಗಮನ ನೀಡಲು ನಿರ್ಧರಿಸಿರುವುದಾಗಿ ವರದಿಯೊಂದು ತಿಳಿಸಿದೆ. ಏಕದಿನ ವಿಶ್ವಕಪ್​ ಸೋಲಿನ ಬಳಿಕವೇ ಉಭಯ ಆಟಗಾರರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಉಭಯ ಆಟಗಾರರು ಈ ವಿಚಾರವನ್ನು ಅಧಿಕೃತವಾಗಿ ಎಲ್ಲಿಯೂ ಇದುವರೆಗೆ ಹೇಳಿಲ್ಲ. ಕೆಲ ದಿನಗಳಲ್ಲಿ ಈ ನಿರ್ಧಾರ ಪ್ರಕಟಿಸಿದರೂ ಅಚ್ಚರಿಯಿಲ್ಲ.

Exit mobile version