Site icon Vistara News

Rohit Sharma: ಫೈನಲ್​ ಪಂದ್ಯದಲ್ಲಿ ಹಲವು ದಾಖಲೆ ಬರೆದ ರೋಹಿತ್ ಶರ್ಮ

rohit sharma

ಅಹಮದಾಬಾದ್​: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ಈ ಬಾರಿಯ ವಿಶ್ವಕಪ್​ನಲ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದರು.

ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಭಾರತಕ್ಕೆ ರೋಹಿತ್​ ಶರ್ಮ ಅವರು ಬಿರುಸಿನ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸಿದರು. 31 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 3 ಸಿಕ್ಸರ್​ ನರೆವಿನಿಂದ 47 ರನ್​ಗಳಿಸಿ ಟ್ರಾವಿಸ್​ ಹೆಡ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ದಾಖಲೆಯ ಜತೆಯಾಟ

ರೋಹಿತ್​ ಶರ್ಮ ಮತ್ತು ಶುಭಮನ್​ ಗಿಲ್​ ಅವರು ಈ ವಿಶ್ವಕಪ್​ ಟೂರ್ನಿಯಲ್ಲಿ ಜತೆಯಾಟದ ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಗಿಲ್​ ಕ್ರಿಸ್ಟ್​ ಮತ್ತು ಮಾರ್ಕ್​ ವಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 1999ರ ವಿಶ್ವಕಪ್​ ಋತುವಿನಲ್ಲಿ ಗಿಲ್​ಕ್ರಿಸ್ಟ್​ ಮತ್ತು ಮಾರ್ಕ್​ ವಾ 1,518 ರನ್‌ಗಳನ್ನು ಬಾರಿಸಿದ್ದರು. 2023ರ ಋತುವಿನಲ್ಲಿ ಗಿಲ್ ಮತ್ತು ರೋಹಿತ್ 1523 ರನ್ ಬಾರಿಸಿದರು.

ದಾಖಲೆ ಸಚಿನ್​ ಮತ್ತು ಗಂಗೂಲಿ ಹೆಸರಿನಲ್ಲಿದೆ. 1998ರ ವಿಶ್ವಕಪ್​ನಲ್ಲಿ ಸಚಿನ್​ ಮತ್ತು ಸೌರವ್​ ಗಂಗೂಲಿ ಅವರು ಆರಂಭಿಕರಾಗಿ 1,635 ರನ್‌ಗಳನ್ನು ಬಾರಿಸಿದ್ದರು.

ಇದನ್ನೂ ಓದಿ IND vs AUS Final: ಮೋದಿ ಸ್ಟೇಡಿಯಂನಲ್ಲಿ ಜನಸಾಗರ; ಎಲ್ಲೆಲ್ಲೂ ಕಂಗೊಳಿಸಿದ ನೀಲ ವರ್ಣ

ಸಿಕ್ಸರ್​ ದಾಖಲೆ

ಈ ಪಂದ್ಯದಲ್ಲಿ ಮೂರು ಸಿಕ್ಸರ್​ ಬಾರಿಸುವ ಮೂಲಕ ರೋಹಿತ್​ ಅವರು ಏಕದಿನ ಕ್ರಿಕೆಟ್​ನಲ್ಲಿ ತಂಡವೊಂದರ ವಿರುದ್ಧ ಅತ್ಯಧಿಕ ಸಿಕ್ಸರ್​ ಬಾರಿಸಿದ ಆಟಗಾರ ಎನಿಸಿಕೊಂಡರು. ಕ್ರಿಸ್​ ಗೇಲ್​ ಅವರು ಇಂಗ್ಲೆಂಡ್ ವಿರುದ್ಧ 85 ಸಿಕ್ಸರ್‌ಗಳನ್ನು ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ರೋಹಿತ್​ ಅವರು ಆಸ್ಟ್ರೇಲಿಯಾ ವಿರುದ್ಧ 86 ಸಿಕ್ಸರ್​ ಬಾರಿಸಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಈ ಬಾರಿಯ ವಿಶ್ವಕಪ್​ನಲ್ಲಿ ರೋಹಿತ್​ 11 ಪಂದ್ಯ ಆಡಿ 31 ಸಿಕ್ಸರ್​ ಬಾರಿಸಿದ ಸಾಧನೆ ಮಾಡಿದರು.

ನಾಯಕನಾಗಿ ದಾಖಲೆ

36 ವರ್ಷದ ರೋಹಿತ್​ ಶರ್ಮ ಅವರು ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ನಾಯಕರಾದರು. ಈ ವಿಶ್ವಕಪ್‌ನಲ್ಲಿ ಹಿಟ್‌ಮ್ಯಾನ್ 594 ರನ್ ಗಳಿಸಿದರು. ಇದಕ್ಕೂ ಮುನ್ನ ಈ ದಾಖಲೆ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಹೆಸರಿನಲ್ಲಿತ್ತು. ವಿಲಿಯಮ್ಸನ್​ 2019ರ ವಿಶ್ವಕಪ್‌ನಲ್ಲಿ 578 ರನ್ ಗಳಿಸಿದ್ದರು.

ಟೂರ್ನಿಯುದ್ದಕ್ಕೂ ಆಕ್ರಮಣಕಾರಿ ಬ್ಯಾಟಿಂಗ್​ ಶೈಲಿಯಲ್ಲಿ ಆಡಿದ ರೋಹಿತ್​ ಶರ್ಮ ಅವರು ಈ ಬಾರಿಯ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಹಿಟ್‌ಮ್ಯಾನ್‌ ಖ್ಯಾತಿಗೆ ತಕ್ಕ ಆಡಿದ ಅವರು ವಿಶ್ವಕಪ್‌ನ ಬಹುತೇಕ ಎಲ್ಲ ಪಂದ್ಯಗಳಲ್ಲೂ ತಂಡಕ್ಕೆ ಅತ್ಯಂತ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಆಸೀಸ್​ ವಿರುದ್ಧದ ಆರಂಭಿಕ ಪಂದ್ಯದಲ್ಲಿ ವೈಫಲ್ಯ ಕಂಡಿದ್ದು ಬಿಟ್ಟರೆ ಉಳಿದ ಎಲ್ಲ ಪಂದ್ಯಗಳಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ 131 ರನ್‌ ಬಾರಿಸಿ ವಿಶ್ವಕಪ್​ನಲ್ಲಿ ಅತ್ಯಧಿಕ 7 ಶತಕ ಬಾರಿಸಿದ ಸಾಧನೆ ಮಾಡಿದ್ದರು. ಪಾಕಿಸ್ತಾನ ವಿರುದ್ಧ 51, ಬಾಂಗ್ಲಾದೇಶ ವಿರುದ್ಧ 48, ನ್ಯೂಜಿಲ್ಯಾಂಡ್‌ ವಿರುದ್ಧ 46, ಇಂಗ್ಲೆಂಡ್‌ ವಿರುದ್ಧ 87, ದಕ್ಷಿಣ ಆಫ್ರಿಕಾ ವಿರುದ್ಧ 40, ನೆದರ್ಲೆಂಡ್ಸ್‌ ವಿರುದ್ಧ 61 ರನ್‌ ಗಳಿಸಿದರು. ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 47 ರನ್‌ ಗಳಿಸಿದ ರೋಹಿತ್‌ ಫೈನಲ್​ ಪಂದ್ಯದಲ್ಲಿಯೂ 47 ರನ್‌ಗಳಿದರು. ಒಟ್ಟಾರೆ ಅವರು ಆಡಿದ 11 ಪಂದ್ಯಗಳಲ್ಲಿ 597 ರನ್​ ಬಾರಿಸಿದರು.

Exit mobile version