ಮೊಹಾಲಿ: 14 ತಿಂಗಳ ಬಳಿಕ ಭಾರತ ಪರ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿರುವ ರೋಹಿತ್ ಶರ್ಮ(Rohit Sharma) ಇಂದು ನಡೆಯುವ ಅಫಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯದಲ್ಲಿ(India vs Afghanistan, 1st T20I) ಹಲವು ದಾಖಲೆಯನ್ನು ನಿರ್ಮಿಸುವ ಇರಾದೆಯಲ್ಲಿದ್ದಾರೆ.
ರೋಹಿತ್ ಶರ್ಮ ಇಂದು ಮೊಹಾಲಿಯಲ್ಲಿ ನಡೆಯುವ ಪಂದ್ಯದಲ್ಲಿ 44 ರನ್ ಗಳಿಸಿದರೆ ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿಯಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎಂಬ ಹಿರಿಮೆಗೆ ರೋಹಿತ್ ಪಾತ್ರರಾಗಲಿದ್ದಾರೆ. ಈ ಮೂಲಕ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.
ಸದ್ಯಕ್ಕೆ ದಾಖಲೆ ವಿರಾಟ್ ಹೆಸರಿನಲ್ಲಿದೆ ಕೊಹ್ಲಿ ಟಿ20ಯಲ್ಲಿ ಭಾರತ ತಂಡವನ್ನು 50 ಪಂದ್ಯಗಳಲ್ಲಿ ಮುನ್ನಡೆಸಿ 46 ಇನಿಂಗ್ಸ್ ಮೂಲಕ 13 ಅರ್ಧಶತಕದ ನೆರವಿನಿಂದ ಒಟ್ಟು 1,570 ರನ್ ಬಾರಿಸಿದ್ದಾರೆ. ಈ ದಾಖಲೆಯ ಮುರಿಯಲು ರೋಹಿತ್ಗೆ 44 ರನ್ಗಳ ಅವಶ್ಯವಿದೆ. ರೋಹಿತ್ ನಾಯಕನಾಗಿ 51 ಇನಿಂಗ್ಸ್ ಆಡಿ 1527 ರನ್ ಗಳಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 10 ಅರ್ಧಶತಕ ದಾಖಲಾಗಿದೆ.
ಇದನ್ನೂ ಓದಿ IND vs AFG: ಇಂದು ನಡೆಯುವ ಭಾರತ-ಆಫ್ಘಾನ್ ಟಿ20 ಪಂದ್ಯಕ್ಕೆ ಮಳೆ ಕಾಟ ಇದೆಯೇ?
ಪಂದ್ಯ ಗೆದ್ದರೂ ದಾಖಲೆ ಬರೆಯಲಿದ್ದಾರೆ ರೋಹಿತ್
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಯಾವೊಬ್ಬ ಆಟಗಾರನೂ ಇದುವರೆಗೆ 100 ಪಂದ್ಯಗಳಲ್ಲಿ ಗೆಲುವು ಕಂಡಿಲ್ಲ. ಈ ದಾಖಲೆ ನಿರ್ಮಿಸಲು ರೋಹಿತ್ಗೆಗೆ ಕೇವಲ ಒಂದು ಗೆಲುವಿನ ಅಗತ್ಯವಿದೆ. 2007ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೋಹಿತ್ ಇಲ್ಲಿಯವರೆಗೂ 148 ಪಂದ್ಯಗಳನ್ನು ಆಡಿ 99 ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ. ಒಂದು ನಡೆಯುವ ಅಫಘಾನಿಸ್ತಾನ ವಿರುದ್ಧದ ಮೊದಲ ಟಿ20 ಪಂದ್ಯ ಗೆದ್ದರೆ 100 ಅಂತಾರಾಷ್ಟ್ರೀಯ ಟಿ20 ಪಂದ್ಯ ಗೆದ್ದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆದರೆ, 100 ಟಿ20 ಗೆದ್ದ ಮೊದಲ ಆಟಗಾರ್ತಿ ಎಂಬ ದಾಖಲೆ ಇಂಗ್ಲೆಂಡ್ ತಂಡದ ಡೇನಿಯಲ್ ವ್ಯಾಟ್ ಅವರ ಹೆಸರಿನಲ್ಲಿದೆ.
2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ರೋಹಿತ್ ಶರ್ಮ ಅವರು ಆಡುತ್ತಿರುವ ಮೊದಲ ಟಿ20 ಸರಣಿ ಇದಾಗಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಆಡಿದ್ದ ರೋಹಿತ್ ಬಳಿಕ ಭಾರತ ಪರ ಆಡಿಲ್ಲ. 14 ತಿಂಗಳ ಬಳಿಕ ಟಿ20 ತಂಡ ಸೇರಿದ ರೋಹಿತ್ ಯುವ ಬ್ಯಾಟರ್ಗಳ ಮುಂದೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಬೇಕಿದೆ.
ಸಿಕ್ಸರ್ನಲ್ಲಿಯೂ ದಾಖಲೆ ಬರೆಯುವ ಅವಕಾಶ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 582 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೋಹಿತ್ ಶರ್ಮ, ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಒಟ್ಟು 18 ಸಿಕ್ಸರ್ ಬಾರಿಸಿದರೆ 600 ಸಿಕ್ಸರ್ಗಳನ್ನು ಪೂರ್ತಿಗೊಳಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಲಿದ್ದಾರೆ. ಸದ್ಯ 486 ಇನಿಂಗ್ಸ್ ಆಡಿರುವ ರೋಹಿತ್ ಇದುವರೆಗೆ ಟೆಸ್ಟ್ನಲ್ಲಿ 77, ಏಕದಿನದಲ್ಲಿ 323, ಟಿ20ಯಲ್ಲಿ 182 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 600 ಸಿಕ್ಸರ್ಗಳಿಗೆ ಇನ್ನು 18 ಸಿಕ್ಸರ್ಗಳ ಅಗತ್ಯವಿದೆ.