ಮುಂಬಯಿ: ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿ ಎಲ್ಲ ಅಭಿನಂದನಾ ಕಾರ್ಯಕ್ರಮ ಮತ್ತು ಸನ್ಮಾನಗಳನ್ನು ಸ್ವೀಕರಿಸಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ(Rohit Sharma) ಇದೀಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ರೋಹಿತ್ ತಮ್ಮ ಪತ್ನಿ, ಮಗಳ ಜತೆ ಮುಂಬೈ ವಿಮಾನ ನಿಲ್ದಾಣದಿಂದ ವಿದೇಶ ಪ್ರಯಾಣ ಬೆಳೆಸಿದ ವಿಡಿಯೊ ವೈರಲ್ ಆಗಿದೆ. ರೋಹಿತ್ ಮಾತ್ರವಲ್ಲದೆ ಸೂರ್ಯಕುಮಾರ್ ಯಾದವ್ ಕೂಡಾ ಪತ್ನಿ ಜತೆ ಪ್ರವಾಸಕ್ಕೆ ತೆರಳಿದ್ದಾರೆ. ಒಟ್ಟಾರೆ ವಿಶ್ವಕಪ್ ಆಡಿದ ಟೀಮ್ ಇಂಡಿಯಾದ ಹಲವು ಆಟಗಾರರು ಮುಂದಿನ ಸರಣಿಗೂ ಮುನ್ನ ಕೊಂಚ ರಿಲ್ಯಾಕ್ಸ್ ಆಗುವ ನಿಟ್ಟಿನಲ್ಲಿ ತಮ್ಮ ಕುಟುಂಬದ ಜತೆ ನೆಚ್ಚಿನ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ.
ರೋಹಿತ್ ನಾಯಕತ್ವದಲ್ಲಿ, ಕಳೆದ ವಾರ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ಜಯದೊಂದಿಗೆ 11 ವರ್ಷಗಳ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಿತ್ತು. 2007 ರ ಉದ್ಘಾಟನಾ ಆವೃತ್ತಿಯ ನಂತರ ಇದು ಭಾರತಕ್ಕೆ ಒಲಿದ ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯಾಗಿತ್ತು. ಮೆನ್ ಇನ್ ಬ್ಲೂ ಈ ಹಿಂದೆ ರೋಹಿತ್ ಅವರ ನಾಯಕತ್ವದಲ್ಲಿ ಎರಡು ಫೈನಲ್‌ಗಳನ್ನು ಆಡಿತ್ತು. ಏಕದಿನ ವಿಶ್ವಕಪ್ ಮತ್ತು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು.
ಇದನ್ನೂ ಓದಿ Rohit Sharma: ನನಗೆ ಟಿ20ಗೆ ನಿವೃತ್ತಿ ಘೋಷಿಸಲು ಮನಸ್ಸು ಇರಲಿಲ್ಲ; ಆಘಾತಕಾರಿ ಹೇಳಿಕೆ ನೀಡಿದ ರೋಹಿತ್ ಶರ್ಮಾ
ಚಾಂಪಿಯನ್ಸ್ ಟ್ರೋಫಿಗೂ ರೋಹಿತ್ ನಾಯಕ
ಏಕದಿನ ಮತ್ತು ಟೆಸ್ಟ್ ಮಾದರಿಗಳಲ್ಲಿ ರೋಹಿತ್ ಶರ್ಮ(Rohit Sharma) ಭಾರತ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ(BCCI secretary Jay Shah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿ(Champions Trophy) ಟೂರ್ನಿಯಲ್ಲಿಯೂ ರೋಹಿತ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬರುವ ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವರ್ಷ ನಡೆಯಲಿರುವ ಮೂರನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡ ರೋಹಿತ್ ಶರ್ಮ ನಾಯಕತ್ವದಲ್ಲಿ ಚಾಂಪಿಯನ್ ಆಗಲಿದೆ” ಎಂದು ಜಯ್ ಶಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
2025ರಲ್ಲಿ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿದುಬಂದಿದೆ. ಕೆಲದಿನಗಳ ಹಿಂದಷ್ಟೇ ಚಾಂಪಿಯನ್ಸ್ ಟ್ರೋಫಿಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಮಾ.1ಕ್ಕೆ ಲಾಹೋರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ನಿಗದಿ ಮಾಡಿತ್ತು. ಆದರೆ, ಭದ್ರತೆಯ ಕಾರಣವನ್ನು ನೀಡಿರುವ ಬಿಸಿಸಿಐ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.