ಕೊಲಂಬೊ: 27 ವರ್ಷ ಬಳಿಕ ಶ್ರೀಲಂಕಾ ವಿರುದ್ಧ ಸರಣಿ ಸೋಲು ಕಂಡ ಭಾರತ ತಂಡದ ನಾಯಕ ರೋಹಿತ್ ಶರ್ಮ(Rohit Sharma) ಈ ಸೋಲಿನ ಬಳಿಕ ದೇಶೀಯ ಕ್ರಿಕೆಟ್ನ ಮಹತ್ವ ಏನೆಂದು ತಿಳಿಸಿದ್ದಾರೆ. ಬುಧವಾರ ನಡೆದಿದ್ದ ಸರಣಿಯ ಅಂಯಿಮ ಏಕದಿನ ಪಂದ್ಯದಲ್ಲಿ ಭಾರತ ಲಂಕಾ(Sri Lanka) ವಿರುದ್ಧ 110 ರನ್ಗಳ ಹೀನಾಯ ಸೋಲಿಗೆ ತುತ್ತಾಗಿತ್ತು.
ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದಾರೆ.
ರೋಹಿತ್ ಅವರ ಈ ಹೇಳಿಕೆಗೆ ನೆಟ್ಟಿಗರು ಸರಿಯಾಗಿ ತಿರುಗೇಟು ನೀಡಿದ್ದಾರೆ. ಸರಣಿ ಸೋತಾಗ ಮಾತ್ರ ದೇಶೀಯ ಕ್ರಿಕೆಟ್ ನೆನೆಪಾಗುತ್ತದೆ. ಅದೆಷ್ಟೋ ಆಟಗಾರರು ದೇಶೀಯ ಕ್ರಿಕೆಟ್ನಲ್ಲಿ ನಿಮಗಿಂತ ಶ್ರೇಷ್ಠ ಸಾಧನೆ ಮತ್ತು ಪ್ರದರ್ಶನ ತೋರಿದರೂ ಅವರಿಗೆ ಅವಕಾಶ ನೀಡದೆ ನಿಮ್ಮ ಒಳ ರಾಜಕೀಯದಿಂದ ಐಪಿಎಲ್ನಲ್ಲಿ ಆಡಿದ ಆಟಗಾರರಿಗೆ ಮಣೆ ಹಾಕುತ್ತಿದ್ದೀರಿ. ಈಗ ನಿಮ್ಮ ಬುಡಕ್ಕೆ ನೀರು ಬಂದಾಗ ದೇಶೀಯ ಕ್ರಿಕೆಟ್ ನೆನಪಾಗುತ್ತದೆ ಎಂದು ಹೇಳುವ ಮೂಲಕ ರೋಹಿತ್ಗೆ ತಿವಿದಿದ್ದಾರೆ.
ಇದನ್ನೂ ಓದಿ IND vs SL 3rd ODI: 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಏಕದಿನ ಸರಣಿ ಶ್ರೀಲಂಕಾ ಮಡಿಲಿಗೆ
ಬುಧವಾರ ಕೊಲೊಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ 249 ರನ್ ಬಾರಿಸಿ ಸವಾಲೊಡ್ಡಿತು. ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು. ಭಾರತದ ಪರ ರೋಹಿತ್ ಶರ್ಮ (35), ವಾಷಿಂಗ್ಟನ್ ಸುಂದರ್ (30) ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್‌ಗಳೂ ರನ್ ಕಲೆಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಂದ್ಯ ಸೋತಿತು. ಸತತ ಮೂರು ಪಂದ್ಯಗಳಲ್ಲೂ ಶ್ರೀಲಂಕಾ ತಂಡವು ಸ್ಪಿನ್ ದಾಳಿ ನಡೆಸುವ ಮೂಲಕ ಭಾರತ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಸ್ಪಿನ್ಗೆ ಹೆಚ್ಚಾಗಿ ಉತ್ತಮ ಬ್ಯಾಟ್ ಬೀಸುತ್ತಿದ್ದ ಭಾರತ ಲಂಕಾದಲ್ಲಿ ಪರದಾಟ ನಡೆಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಪಂದ್ಯದ ಸೋಲಿಗೆ ಸಹ ಆಟಗಾರರ ಬ್ಯಾಟಿಂಗ್ ವೈಫಲ್ಯವೇ ಕಾರಣ ಎಂದು ರೋಹಿತ್ ನೇರ ಆರೋಪವನ್ನು ಕೂಡ ಮಾಡಿದ್ದಾರೆ. ನಾನು ತಂಡದ ಗೆಲುವಿಗಾಗಿ ಪ್ರಯತ್ನಪಟ್ಟಿದ್ದೇನೆ. ಆದರೆ, ಉಳಿದ ಆಟಗಾರರು ಬ್ಯಾಟಿಂಗ್ ವೈಫಲ್ಯ ಕಂಡರು. ಒಬ್ಬರೇ ಆಡಿ ಪಂದ್ಯವನ್ನು ಗೆಲ್ಲಿಸುವುದು ಕಷ್ಟ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಹ ಆಟಗಾರರ ಕಳಪೆ ಪ್ರದರ್ಶನದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.